ಯಕ್ಷಗಾನ ಕರ್ನಾಟಕ ರಾಜ್ಯದ ಕಲೆಯಾಗಲಿ: ವಾಸುದೇವ ಸಾಮಗ

Update: 2019-05-26 15:07 GMT

ಉಡುಪಿ, ಮೇ 26: ಪರ್ಯಾಯ ಪಲಿಮಾರು ಮಠ, ಉಡುಪಿ ಯಕ್ಷಗಾನ ಕಲಾರಂಗ ಹಾಗೂ ಕೋಟೇಶ್ವರ ಸಂಯಮಂ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಎಂ. ಆರ್.ವಾಸುದೇವ ಸಾಮಗ -70ರ ಸಮಾರಂಭ 'ಸಾಮಗ ಸಪ್ತತಿ' ಕಾರ್ಯ ಕ್ರಮದಲ್ಲಿ ವಾಸುದೇವ ಸಾಮಗರನ್ನು ಅಭಿನಂದಿಸಲಾಯಿತು.

ಅಭಿನಂದನೆ ನೆರವೇರಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾ ಧೀಶತೀರ್ಥ ಸ್ವಾಮೀಜಿ ಮಾತನಾಡಿ, ರಾಜಕಾರಣ, ಸನ್ಯಾಸದಲ್ಲಿ ಕುಟುಂಬ ಬರುವುದು ಒಳ್ಳೆಯದಲ್ಲ. ಆದರೆ ಯಕ್ಷಗಾನ ಕಲೆಯಲ್ಲಿ ಮಾತ್ರ ಇಡೀ ಕುಟುಂಬವೇ ತೊಡಗಿಸಿಕೊಂಡು ಅದನ್ನು ಜೀವಂತವಾಗಿರಿಸಿಕೊಳ್ಳಬೇಕು. ಈ ವಿಚಾರದಲ್ಲಿ ಸಾಮಗ ಪರಂಪರೆ ಅತ್ಯಂತ ವಿಶಿಷ್ಟವಾದುದು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಾಸುದೇವ ಸಾಮಗ, ಯಕ್ಷಗಾನ ಇಡೀ ರಾಜ್ಯ ಕಲೆಯಾಗಿದೆ. ಆದುದರಿಂದ ಅದನ್ನು ರಾಜ್ಯದ ಕಲೆಯನ್ನಾಗಿ ಘೋಷಿಸುವ ಬಗ್ಗೆ ನಿರ್ಣಯ ಮಾಡಬೇಕಾಗಿದೆ. ಅದಕ್ಕೆ ಎಲ್ಲರ ಬೆಂಬಲ ಕೂಡ ಅತಿಅಗತ್ಯ ಎಂದು ಅಭಿಪ್ರಾಯ ಪಟ್ಟರು.
'ಸಾಮಗಾಥೆ' ಕೃತಿಯನ್ನು ಬಿಡುಗಡೆಗೊಳಿಸಿದ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಮಾತನಾಡಿ, ವಾಸುದೇವ ಸಾಮಗ ಕಲಾವಿದರು ಮಾತ್ರವಲ್ಲದೆ ಉತ್ತಮ ನಿರ್ದೇಶಕರು ಕೂಡ ಆಗಿದ್ದಾರೆ. ಯಾವುದೇ ಪಾತ್ರವನ್ನು ಗಂಭೀರವಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗೆ ಇದೆ. ಯಕ್ಷಗಾನ ಕ್ಷೇತ್ರದ ಅತ್ಯುತ್ತಮ ಕಲಾವಿದರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಲಾವಿದ ಪ್ರೊ.ಎಂ.ಎ.ಹೆಗಡೆ ಶಿರಸಿ ಮಾತನಾಡಿ, ವಾಸು ದೇವ ಸಾಮಗರ ಜೀವನದ ಕುರಿತು ಸಾಕ್ಷಚಿತ್ರ ಮಾಡಬೇಕಾಗಿದೆ. ಅದಕ್ಕೆ ಅವರು ಯೋಗ್ಯವಾದ ವ್ಯಕ್ತಿ. ಆ ಕುರಿತು ಚಿಂತನೆ ಅಗತ್ಯ. ಅವರಿಗೆ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ದೊರಕಬೇಕಾಗಿದೆ ಎಂದು ಹಾರೈಸಿದರು. ಎಚ್.ಶ್ರೀಧರ ಹಂದೆ ಕೋಟ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಎಂಟು ಸಂಸ್ಥೆಗಳಿಗೆ ನಿಧಿ ಸಮರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ್, ಮೀರಾ ಸಾಮಗ, ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು.

ಪ್ರದೀಪ್ ವಿ.ಸಾಮಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾರಂಗ ಅಧ್ಯಕ್ಷ ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕೆಕಾರ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News