ಸಿಎಸ್‌ಒ ಮತ್ತು ಎನ್‌ಎಸ್‌ಎಸ್‌ಒ ವಿಲೀನ:ಕೇಂದ್ರ ಸರಕಾರದ ನಿರ್ಧಾರ

Update: 2019-05-26 16:27 GMT

ಹೊಸದಿಲ್ಲಿ,ಮೇ 26: ಭಾರತದ ಆರ್ಥಿಕತೆ ಸೂಚಕಗಳನ್ನು ಬಿಡುಗಡೆಗೊಳಿಸುವ ಕೇಂದ್ರೀಯ ಅಂಕಿಅಂಶಗಳ ಕಚೇರಿ (ಸಿಎಸ್‌ಒ) ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ(ಎನ್‌ಎಸ್‌ಎಸ್‌ಒ)ಗಳನ್ನು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ(ಎನ್‌ಎಸ್‌ಒ)ಯಲ್ಲಿ ವಿಲೀನಗೊಳಿಸಲು ಕೇಂದ್ರವು ನಿರ್ಧರಿಸಿದೆ. ಇವೆರಡೂ ಸಂಸ್ಥೆಗಳನ್ನು ತನ್ನ ಅಧೀನದಲ್ಲಿ ಹೊಂದಿರುವ ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಮೇ 23ರಂದು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿತ್ತು.

 ಸಿಎಸ್‌ಒ ಜಿಡಿಪಿ ಮತ್ತು ಐಐಪಿಯಂತಹ ಆರ್ಥಿಕ ಸೂಚಕಗಳ ಬಗ್ಗೆ ಮಾಹಿತಿಗಳನ್ನು ಒದಗಿಸಿದರೆ,ಎನ್‌ಎಸ್‌ಎಸ್‌ಒ ಬಳಕೆ ವೆಚ್ಚ ಮತ್ತು ನಿರುದ್ಯೋಗದಂತಹ ವಿಷಯಗಳ ಮೇಲೆ ಸಂಶೋಧನೆಗಳನ್ನು ನಡೆಸುತ್ತದೆ.

ಸಿಎಸ್‌ಒ ಮತ್ತು ಎನ್‌ಎಸ್‌ಎಸ್‌ಒ ಒಂದೇ ಸಂಸ್ಥೆಯ ಎರಡು ಅಂಗಗಳಾಗಿವೆ ಮತ್ತು ಜೊತೆಯಾಗಿ ಕೆಲಸ ಮಾಡುವ ಅಗತ್ಯವಿದೆ. ಕೆಲಸದ ಪುನರಾವರ್ತನೆಯನ್ನು ತಪ್ಪಿಸಲು ಮತ್ತು ಅಂಕಿಅಂಶ ವ್ಯವಸ್ಥೆಯನ್ನು ಬಲಗೊಳಿಸಲು ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಎನ್‌ಎಸ್‌ಒದ ಮುಖ್ಯಸ್ಥರಾಗಲಿರುವ ಭಾರತದ ಮುಖ್ಯ ಅಂಕಿಅಂಶ ತಜ್ಞ ಪ್ರವೀಣ್ ಶ್ರೀವಾಸ್ತವ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರದ ನಿರ್ಧಾರವು ಇವೆರಡೂ ಸಂಸ್ಥೆಗಳ ಸ್ವಾತಂತ್ರವನ್ನು ದುರ್ಬಲಗೊಳಿಸಲಿದೆ ಎನ್ನುವುದನ್ನು ನಿರಾಕರಿಸಿದ ಅವರು,ಈ ಸಂಸ್ಥೆಗಳ ಮೇಲೆ ನಿಯಂತ್ರಣದ ಕೊರತೆ ಸರಕಾರಕ್ಕೆ ಸವಾಲಾಗಿದೆ ಎಂದರು.

2005ರಲ್ಲಿ ಯುಪಿಎ ಸರಕಾರವು ಅಧಿಕಾರದಲ್ಲಿದ್ದಾಗ ಕೂಡ ಮಾಜಿ ಆರ್‌ಬಿಐ ಗವರ್ನರ್ ಸಿ.ರಂಗರಾಜನ್ ನೇತೃತ್ವದ ರಾಷ್ಟ್ರೀಯ ಅಂಕಿಅಂಶ ಆಯೋಗವು ಸಿಎಸ್‌ಒ ಮತ್ತು ಎನ್‌ಎಸ್‌ಎಸ್‌ಒ ವಿಲೀನಕ್ಕೆ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News