ಝಾಕಿರ್ ನಾಯ್ಕ್ ಟ್ರಸ್ಟ್, ವೈಯಕ್ತಿಕ ಖಾತೆಗಳಿಗೆ ಶಂಕಾತ್ಮಕ ದೇಣಿಗೆಗಳು ಜಮಾ ಆಗಿತ್ತು: ಈ.ಡಿ.

Update: 2019-05-26 16:31 GMT

ಹೊಸದಿಲ್ಲಿ,ಮೇ 26: ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರು ಹಲವಾರು ವರ್ಷಗಳಲ್ಲಿ ‘ದ್ವೇಷವನ್ನು ಹರಡಿದ್ದ ಮತ್ತು ಭೀತಿವಾದವನ್ನು ಸೇರಲು ಮುಸ್ಲಿಂ ಯುವಕರನ್ನು ಪ್ರಚೋದಿಸಿದ್ದ ’ ತನ್ನ ಭಾಷಣಗಳಿಗಾಗಿ ತನ್ನ ವೈಯಕ್ತಿಕ ಮತ್ತು ತನ್ನ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಲ್ಲಿ ಅನಾಮಿಕ ‘ಹಿತೈಷಿ’ಗಳಿಂದ ಕೋಟ್ಯಂತರ ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿದ್ದರು ಎಂದು ಜಾರಿ ನಿರ್ದೇಶನಾಲಯ(ಈ.ಡಿ)ವು ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ನಾಯ್ಕ್ ಅವರ ಮುಂಬೈನ ದಿ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್‌ಎಫ್) ದೇಶೀಯ ಮತ್ತು ಯುಎಇ, ಸೌದಿ ಅರೇಬಿಯಾ, ಬಹರೈನ್, ಕುವೈತ್, ಒಮಾನ್ ಮತ್ತು ಮಲೇಷಿಯಾ ಸೇರಿದಂತೆ ವಿವಿಧ ದೇಶಗಳ ದಾನಿಗಳಿಂದ ದೇಣಿಗೆಗಳು ಮತ್ತು ಝಕಾತ್ ರೂಪದಲ್ಲಿ ನಿಧಿಗಳನ್ನು ಸಂಗ್ರಹಿಸಿತ್ತು. ಟ್ರಸ್ಟ್ ಸಿಟಿ ಬ್ಯಾಂಕ್,ಡಿಸಿಬಿ ಬ್ಯಾಂಕ್ ಲಿ.ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು,ಈ ಖಾತೆಗಳಿಗೆ ದೇಣಿಗೆಗಳು ಜಮೆಯಾಗುತ್ತಿದ್ದವು ಮತ್ತು ಈ ಖಾತೆಗಳನ್ನು ನಾಯ್ಕ್ ನಿಯಂತ್ರಿಸುತ್ತಿದ್ದರು ಎಂದು ಈ.ಡಿ.ಹೇಳಿದೆ.

ನಾಯ್ಕ್ ತನಿಖೆಗೆ ಗೈರುಹಾಜರಾಗಿದ್ದು,ಹಾಲಿ ಮಲೇಷಿಯಾದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.

ದಾನಿಗಳ ಹೆಸರುಗಳನ್ನು ರಸೀದಿಗಳಲ್ಲಿ ‘ಹಿತೈಷಿ’ಗಳು ಎಂದು ನಮೂದಿಸಿರುವುದರಿಂದ ಅವರು ಅನಾಮಿಕರಾಗುಳಿದಿದ್ದಾರೆ. ನಗದು ರೂಪದಲ್ಲಿ ದೇಣಿಗೆಗಳನ್ನು ನೀಡಿರುವುದರಿಂದ ರಸೀದಿಗಳಲ್ಲಿ ಕೇವಲ ಹೆಸರುಗಳನ್ನು ಮಾತ್ರ ಉಲ್ಲೇಖಿಸಲಾಗಿದೆ ಮತ್ತು ಅವರ ಸಂಪರ್ಕ ವಿವರಗಳನ್ನು ನಮೂದಿಸಿಲ್ಲ. ಇದು ಈ ದೇಣಿಗೆಗಳು ಬೋಗಸ್ ಆಗಿರಬಹುದು ಎಂಬ ಶಂಕೆಯನ್ನು ಸೃಷ್ಟಿಸಿದೆ ಎಂದಿರುವ ಈ.ಡಿ.ವರದಿಯು, 2003-04ರಿಂದ 2016-17ರವರೆಗೆ ಐಆರ್‌ಎಫ್‌ನ ಖಾತೆಗಳಲ್ಲಿ 64.86 ಕೋ.ರೂ.ಗಳು ಜಮೆಯಾಗಿದ್ದವು ಎಂದು ತಿಳಿಸಿದೆ.

ಈ ಹಣದ ಪೈಕಿ ಹೆಚ್ಚಿನ ಭಾಗ ಶಾಂತಿ ಸಮ್ಮೇಳನಗಳನ್ನು ನಡೆಸಲು,ಬಂಡವಳ ಉಪಕರಣಗಳ ಖರೀದಿಗೆ,ವೇತನಗಳ ಪಾವತಿಗೆ ಮತ್ತು ಇತರ ಖರ್ಚುಗಳಿಗಾಗಿ ವೆಚ್ಚವಾಗಿದೆ. ಐಆರ್‌ಎಫ್ ನಾಯ್ಕ್ ನಾಯಕತ್ವದಲ್ಲಿ ವಾರ್ಷಿಕ ಶಾಂತಿ ಸಮ್ಮೇಳನವನ್ನು ನಡೆಸುತ್ತಿತ್ತು ಮತ್ತು ಈ ಸಮ್ಮೇಳನಗಳಲ್ಲಿ ನಾಯ್ಕ ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದರು ಎಂದು ಈ.ಡಿ.ಆರೋಪಿಸಿದೆ.

ಅನಾಮಿಕ ದಾನಿಗಳ ಮೂಲಕ ಪಡೆಯಲಾಗಿರುವ ದೇಣಿಗೆಗಳ ಮೂಲ ಶಂಕಾಸ್ಪದವಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News