ಬಿಜೆಪಿಯಿಂದ ಆತ್ಮಾವಲೋಕನ: ಉತ್ಪಲ್ ಪಾರಿಕ್ಕರ್

Update: 2019-05-26 16:34 GMT

ಪಣಜಿ,ಮೇ 26: ತನ್ನ ತಂದೆ ದೀರ್ಘಕಾಲ ಶಾಸಕರಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಕುರಿತು ಬಿಜೆಪಿಯು ಆತ್ಮಾವಲೋಕನ ನಡೆಸಲಿದೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರ ಪುತ್ರ ಉತ್ಪಲ್ ಪಾರಿಕ್ಕರ್ ಅವರು ರವಿವಾರ ಇಲ್ಲಿ ಹೇಳಿದರು.

ಮಾರ್ಚ್‌ನಲ್ಲಿ ಹಾಲಿ ಶಾಸಕ ಪಾರಿಕ್ಕರ್ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 19ರಂದು ನಡೆದಿದ್ದು,ಕಾಂಗ್ರೆಸ್ ನಾಯಕ ಅಟಾನ್ಸಿಯೊ ಮೊನ್ಸೆರಟ್ಟೆ ಅವರು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಕುಂಕೋಳಿಂಕರ್ ಅವರನ್ನು 1,700 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಈ ಕ್ಷೇತ್ರವು 25 ವರ್ಷಗಳಿಂದಲೂ ಬಿಜೆಪಿ ವಶದಲ್ಲಿತ್ತು.

ಬಿಜೆಪಿ ಸಿದ್ಧಪಡಿಸಿದ್ದ ಅಭ್ಯರ್ಥಿಗಳ ಕಿರುಪಟ್ಟಿಯಲ್ಲಿ ಉತ್ಪಲ್ ಹೆಸರಿತ್ತಾದರೂ ಬಳಿಕ ಅದು ಕುಂಕೋಳಿಂಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಉತ್ಪಲ್ ಬಿಜೆಪಿ ಪರ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ರಾಜ್ಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಈ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿದ್ದಾರೆ ಮತ್ತು ಮುಂದಿನ ಸಲ ಪಣಜಿ ಕ್ಷೇತ್ರವನ್ನು ಗೆದ್ದುಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದಾರೆ ಎಂದು ಉತ್ಪಲ್ ಹೇಳಿದರು.

ನಿಮಗೆ ಟಿಕೆಟ್ ನೀಡಿದ್ದರೆ ಗೆಲುವು ನಿಮ್ಮದಾಗಿರುತ್ತಿತ್ತೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು,ಗತಕಾಲದ ಬಗ್ಗೆ ಮಾತನಾಡುವುದರಿಂದ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಾನು ಭಾವಿಸಿಲ್ಲ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News