2020ರಲ್ಲಿ ಆಪ್ ತೊರೆಯಲಿರುವ ಅಲ್ಕಾ ಲಾಂಬಾ

Update: 2019-05-26 16:38 GMT

ಹೊಸದಿಲ್ಲಿ, ಮೇ.26: ಆಮ್ ಆದ್ಮಿ ಪಕ್ಷದ ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿ ಅಲ್ಕಾ ಲಾಂಬಾ ಮುಂದಿನ ವರ್ಷ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಪಕ್ಷದ ಹಿರಿಯ ನಾಯಕರೊಂದಿಗೆ ಕೆಲವು ಸಮಯದಿಂದ ಭಿನ್ನಾಭಿಪ್ರಾಯ ಹೊಂದಿರುವ ಲಾಂಬಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಲಾಂಬಾ, “ನಿಮ್ಮ ಜೊತೆ ನನ್ನ ಪ್ರಯಾಣ 2013ರಲ್ಲಿ ಆರಂಭವಾಗಿ 2020ರಲ್ಲಿ ಕೊನೆಯಾಗುತ್ತಿದೆ. ತಳಮಟ್ಟದಲ್ಲಿ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತಿರುವ ಕ್ರಾಂತಿಕಾರಿ ಕಾರ್ಯಕರ್ತರಿಗೆ ನನ್ನ ಶುಭಾಶಯಗಳು. ದಿಲ್ಲಿಯಲ್ಲಿ ನೀವು ಒಂದು ಪ್ರಬಲ ಪರ್ಯಾಯವಾಗಿ ಉಳಿಯುತ್ತೀರಿ ಎಂದು ಭಾವಿಸುತ್ತೇನೆ. ಕಳೆದ ರು ವರ್ಷಗಳು ಸ್ಮರಣೀಯವಾಗಿದ್ದವು ಮತ್ತು ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ” ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೊನೆಯಾದ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಆಪ್‌ನ ಹೀನಾಯ ಸೋಲಿನ ಹೊಣೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಹೊರಬೇಕು ಎಂದು ಲಾಂಬಾ ಆಗ್ರಹಿಸಿದ್ದರು. ಅವರ ಈ ಹೇಳಿಕೆಯ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ತೆಗೆದುಹಾಕಲಾಗಿತ್ತು. ಅಲ್ಕಾ ಲಾಂಬಾ 2020ರಲ್ಲಿ ಪಕ್ಷ ತೊರೆಯುವುದಾಗಿ ತಿಳಿಸಿದ್ದರೂ ಮುಂದಿನ ವರ್ಷ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಯ ಮೊದಲು ಪಕ್ಷದಿಂದ ಹೊರನಡೆಯಲಿದ್ದಾರೆಯೇ ಅಥವಾ ಚುನಾವಣೆ ಎದುರಿಸಲಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News