ಗುರುಗ್ರಾಮದಲ್ಲಿ ಮುಸ್ಲಿಂ ಯುವಕನ ಮೇಲಿನ ಹಲ್ಲೆ ಅತ್ಯಂತ ಹೇಯ: ಬಿಜೆಪಿ ಸಂಸದ ಗೌತಮ್ ಗಂಭೀರ್

Update: 2019-05-27 07:34 GMT

ಹೊಸದಿಲ್ಲಿ, ಮೇ 27: ಗುರುಗ್ರಾಮದಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿ ಟೋಪಿ ತೆಗೆದು ‘ಜೈ ಶ್ರೀ ರಾಮ್; ಎಂದು ಹೇಳುವಂತೆ ಗುಂಪೊಂದು ಒತ್ತಾಯಪಡಿಸಿದ ಘಟನೆಯನ್ನು ಮಾಜಿ ಕ್ರಿಕೆಟಿಗ, ಇತ್ತೀಚಿಗಿನ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದಿಲ್ಲಿಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಗೌತಮ್ ಗಂಭೀರ್ 'ಖಂಡನಾರ್ಹ' ಎಂದು ಟೀಕಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು ''ನಾವೊಂದು ಜಾತ್ಯತೀತ ರಾಷ್ಟ್ರ'' ಎಂದು ಒತ್ತಿ ಹೇಳುತ್ತಾ, 'ಜಾವೇದ್ ಅಖ್ತರ್ ಅವರು ‘’ಓ ಪಾಲನ್ ಹಾರೆ, ನಿರ್ಗುಣ್ ಔರ್ ನ್ಯಾರೆ’’ ಎಂದು ಬರೆದರೆ ರಾಕೇಶ್ ಓಂ ಮೆಹ್ರಾ ಅವರು ‘ಅರ್ಜಿಯಾ’ ಪದವನ್ನು ದಿಲ್ಲಿ 6ಗಾಗಿ ಬರೆದಿದ್ದಾರೆ ಎಂದಿದ್ದಾರಲ್ಲದೆ ಗುರುಗ್ರಾಮದ ಅಧಿಕಾರಿಗಳು ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನೊಂದು ಟ್ವೀಟಿನಲ್ಲಿ '' ಆದರಣೀಯ ಪ್ರಧಾನಿ ಮೋದಿಯ ಮಂತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಆಧಾರದಲ್ಲಿ ನನ್ನ ಜಾತ್ಯತೀತ ನಿಲುವುಗಳಿವೆ'' ಎಂದೂ ಬರೆದಿದ್ದಾರೆ.

ಶನಿವಾರ ರಾತ್ರಿ 25 ವರ್ಷದ ಯುವಕ ಮಹಮ್ಮದ್ ಬರಾಕತ್ ಆಲಂ ಮಸೀದಿಯಲ್ಲಿ ನಮಾಝ್ ಸಲ್ಲಿಸಿ ಮನೆಯತ್ತ ಸಾಗುತ್ತಿದ್ದಾಗ ಗುಂಪೊಂದು ಆತನ ಸ್ಕಲ್ ಕ್ಯಾಪ್ ತೆಗೆದು ಜೈ ಶ್ರೀ ರಾಮ್ ಹೇಳುವಂತೆ ಬಲವಂತ ಪಡಿಸಿ, ಆತ ನಿರಾಕರಿಸಿದಾಗ ಆತನ ಮೇಲೆ ಹಲ್ಲೆಗೈದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News