ಅಂಬೇಡ್ಕರ್ ಜನ್ಮದಿನ; ರಾಜ್ಯಮಟ್ಟದ ಅಧ್ಯಯನ ಶಿಬಿರ ಸಮಾರೋಪ

Update: 2019-05-27 12:21 GMT

ಮಂಗಳೂರು, ಮೇ 27: ಬಹುಸಂಖ್ಯಾತ ಹಿಂದೂಗಳಿಂದ ಯಾವುದೇ ತೊಂದರೆಯಿಲ್ಲ. ಆದರೆ, ಬೆರಳಣಿಕೆಯ ಮನುವಾದಿಗಳಿಂದಲೇ ದೇಶಕ್ಕೆ ಆಪತ್ತು ಇದ್ದು, ಮಂಗಳೂರು ಮನುವಾದಿಗಳ ಕೇಂದ್ರವಾಗಿದೆ ಎಂದು ಬೆಂಗಳೂರಿನ ದಮ್ಮಚಾರಿ ಅರವಿಂದ ಬೌದ್ಧ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾವಾದ)ಯಿಂದ ಬುದ್ಧ ಜಯಂತಿ ಹಾಗೂ ಅಂಬೇಡ್ಕರ್‌ರ 128ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ನಂತೂರು-ಬಜ್ಜೋಡಿಯ ಶಾಂತಿಕಿರಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯಮಟ್ಟದ ಅಧ್ಯಯನ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಂವಿಧಾನ ಕೇವಲ ಮುಸ್ಲಿಂ, ಕ್ರೈಸ್ತರು, ಬೌದ್ಧ, ದಲಿತರಿಗೆ ಮಾತ್ರವಲ್ಲ ಹಿಂದುತ್ವವಾದಿಗಳಿಗೂ ಅನ್ವಯಿಸುತ್ತದೆ. ಎಲ್ಲ ಧರ್ಮಗಳ ಜನರು ಸಂವಿಧಾನವನ್ನು ಪಾಲಿಸುತ್ತಿರುವಾಗ ಈ ಮನುವಾದಿಗಳೇಕೆ ಸಂವಿಧಾನವನ್ನು ತಿರಸ್ಕರಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಪ್ರಗತಿಪರ ಚಿಂತಕರೆನಿಸಿಕೊಂಡವರು ಇತ್ತೀಚೆಗೆ ಹಿಂದೂಧರ್ಮ, ದೇವರುಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿನ ಶಾಂತಿ-ಸುವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದೆ. ನಿಂದನಾತ್ಮಕ ಹೇಳಿಕೆಗಳು ಉದ್ವಿಗ್ನತೆಗೆ ಎಡೆಮಾಡಿಕೊಡುತ್ತಿವೆ. ಹಿಂದುತ್ವವಾದಿಗಳೂ ಸಂವಿಧಾನವನ್ನು ಪಾಲಿಸುವಂತಾಗಬೇಕು ಎಂದು ಆಗ್ರಹಿಸಿದರು.

ಅಧ್ಯಯನ ಶಿಬಿರಗಳು ದೂರು ದುಮ್ಮಾನಗಳ ಕೇಂದ್ರವಾಗಬಾರದು. ಎರಡು ದಿನಗಳಿಂದ ಇಲ್ಲಿನ ವೇದಿಕೆಯಲ್ಲಿ ಇನ್ನೊಬ್ಬರ ವಿರುದ್ಧ ದೂರುವುದೇ ಆಗಿದೆ. ಅಧ್ಯಯನ ಶಿಬಿರಗಳು ಚರ್ಚೆಗಳ ಕೇಂದ್ರಸ್ಥಳವಾಗಬೇಕು. ಅಂದಾಗಲೇ ಅಂಬೇಡ್ಕರ್ ಬಯಸಿದ್ದ ಪ್ರಬುದ್ಧ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಸಮಾರಂಭದಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಎಂ.ಗೋವಿಂದರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News