ಬಂಟ್ವಾಳ: ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಉದ್ಘಾಟನೆ
ಬಂಟ್ವಾಳ, ಮೇ 27: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನವನ್ನು ಬಂಟ್ವಾಳ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕಚೈತ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಯೋಗದ ಸಾರವನ್ನುತಿಳಿದುಕೊಂಡು ಜೀವನ ಸಾಗಿಸಿದರೆ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದರು.
ಉಜಿರೆ ಎಸ್‍ಡಿಎಂ ಕಾಲೇಜಿನ ಡಾ.ನಂದೀಶ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯೋಗದ ಮತ್ತು ಜೀವನಶೈಲಿ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಹಿರಿಯ ಯೋಗ ತರಬೇತುದಾರ, ಯೋಗಪಟು ಮಂಗಳೂರಿನ ಮೋನಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೆ ಸ್ಥಾನಿಯಾಗಿರುವ ಬಂಟ್ವಾಳ ಎಸ್‍ವಿಎಸ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಅನುಪಮಾ ಕಾಮತ್ ಮತ್ತು 611 ಅಂಕ ಗಳಿಸಿದ ಶಂಭೂರು ಬೊಂಡಾಲ ಜಗನ್ನಾಥ ಸ್ಮಾರಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮತ್ತು ಡಾ. ಸುಬ್ರಹ್ಮಣ್ಯ ಮತ್ತು ಪ್ರತಿಭಾ ದಂಪತಿಯ ಪುತ್ರ ಜಯಗೋವಿಂದ ಅವರನ್ನು ಗೌರವಿಸಲಾಯಿತು. ಬಳಿಕ ಯೋಗ ಪ್ರಶಿಕ್ಷಣ ಪಡೆದ ಶಿಕ್ಷಕರನ್ನು ಅಭಿನಂದಿಸಲಾಯಿತು.
ಪ್ರತಿಭಾ, ಪ್ರತಿಮಾ ಮತ್ತು ಗೀತಾ ಪ್ರಾರ್ಥಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ರಘುವೀರ ಅವಧಾನಿ ಪ್ರತಿಷ್ಠಾನದ ಕಾರ್ಯಸ್ವರೂಪ ಕುರಿತು ವಿವರಿಸಿದರು. ಕೋಶಾಧಿಕಾರಿ ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಿ.ಸಿ.ರೋಡಿನ ಮಕ್ಕಳ ತಜ್ಞ ವೈದ್ಯ ಡಾ.ಎಂ.ಎಸ್.ಮಹೇಶ್ ಮತ್ತು ಬಳಗದಿಂದ ಸಂಗೀತ ಕಾರ್ಯಕ್ರಮ, ಯೋಗಪಟುಗಳಿಂದ ಯೋಗನೃತ್ಯ ಪ್ರದರ್ಶನಗೊಂಡಿತು.