×
Ad

ಭ್ರಷ್ಠಾಚಾರ ಮುಕ್ತ ಮೂಡುಬಿದಿರೆ ಪುರಸಭೆಗೆ ಆದ್ಯತೆ :ಉಮಾನಾಥ ಕೋಟ್ಯಾನ್

Update: 2019-05-27 19:51 IST

ಮೂಡುಬಿದಿರೆ : ಭ್ರಷ್ಟಾಚಾರ ಮುಕ್ತ ಸುಂದರ ಮೂಡುಬಿದಿರೆಯನ್ನು ರೂಪಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು ಇದನ್ನು ಸಾಕಾರಗೊಳಿಸಲು ಮೇ 29ರಂದು ನಡೆಯುವ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮೂಡುಬಿದಿರೆ ಪುರಸಭೆಯಲ್ಲಿ ಕಳೆದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಮೂವತ್ತು ವರ್ಷಗಳಿಂದ ಪುರಸಭೆಯಲ್ಲಿ ಅಧಿಕಾರವನ್ನು ನಡೆಸುತ್ತಾ ಬಂದಿರುವ ಕಾಂಗ್ರೆಸ್ ಭ್ರಷ್ಠಾಚಾರಕ್ಕೆ ಅವಕಾಶವನ್ನು ನೀಡುತ್ತಾ ಬರುವ ಮೂಲಕ ತ್ಯಾಜ್ಯ ವಿಲೇವಾರಿ ಹೆಸರಲ್ಲಿ ಲಕ್ಷಲಕ್ಷ ಲೂಟಿಗೈಯ್ಯಲಾಗಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸದೆ ಸ್ವೇಚ್ಛೆಯಾಗಿ ನಡೆಸಲಾಗಿದೆ. ಕಳೆದ 10 ವರ್ಷಗಳಿಂದ ನಿವೇಶನರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ನಮ್ಮ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಆದ್ಯತೆಯ ನೆಲೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಮೂಡುಬಿದಿರೆ ಬಸ್ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದ್ದು ಸೂಕ್ತವಾದ ಪಾರ್ಕಿಂಗ್ ಸೌಲಭ್ಯವಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸುವ್ಯವಸ್ಥಿತವಾದ ಬಸ್‍ನಿಲ್ದಾಣವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದ್ದು ಎಂಆರ್‍ಪಿಎಲ್ ಸಹಯೋಗದೊಂದಿಗೆ ಅದನ್ನು ಅನುಷ್ಟಾನಗೊಳಿಸಲಾಗುವುದು. 

ಬಸ್‍ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ 4 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರು ಘಟಕವನ್ನು ತೆರೆಯಲಾಗುವುದು. ಹಿಂದೆ ಜನಸಾಮಾನ್ಯರು ತಮ್ಮ ಕೆಲಸಗಳಿಗೆ ಶಾಸಕರ ಮನೆಗೆ ಅಲೆದಾಡುವ ಸ್ಥಿತಿಯಿತ್ತು. ಈ ಪದ್ಧತಿಗೆ ಅಂತ್ಯ ಹಾಡಿ ವ್ಯವಸ್ಥಿತವಾದ ಶಾಸಕರ ಕಚೇರಿಯನ್ನು ತೆರೆದಿದ್ದು ಶಾಸಕರ ಕಚೇರಿಯಲ್ಲಿ ಪಕ್ಷಬೇಧ ಮರೆತು ಸೇವೆ ನೀಡಲಾಗುತ್ತಿದೆ. ಪುರಸಭೆಗೆ ವಿವಿಧ ಕಾಮಗಾರಿಗಳಿಗಾಗಿ 70 ಲಕ್ಷರೂವನ್ನು ಶಾಸಕರ ಅನುದಾನದಿಂದ ನೀಡಲಾಗಿದೆ. 7 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿಯಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸಿರುವುದಾಗಿ ಹೇಳಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಮುಖಂಡರುಗಳಾದ ಬೃಜೇಶ್ ಚೌಟ, ಮೇಘನಾಥ ಶೆಟ್ಟಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಅಧ್ಯಕ್ಷ ಜೋಯ್ಲಸ್ ಡಿ'ಸೋಜ, ಹರೀಶ್ ಎಂ.ಕೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News