×
Ad

ಗಂಭೀರ್ ಹೇಳಿಕೆ ಬಿಜೆಪಿಯನ್ನು ಟೀಕಿಸುವ ರೀತಿಯಲ್ಲಿದೆ: ಪಕ್ಷದ ಮುಖಂಡರಿಂದ ಟೀಕೆ

Update: 2019-05-27 20:13 IST

ಹೊಸದಿಲ್ಲಿ, ಮೇ 27: ಗುರುಗ್ರಾಮದಲ್ಲಿ ಮುಸ್ಲಿಮ್ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ದುರದೃಷ್ಟಕರ ಎಂದಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್, ವಿಷಯದ ಬಗ್ಗೆ ತಕ್ಷಣ ಗಮನ ಹರಿಸಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಮಧ್ಯೆ, ನೂತನ ಬಿಜೆಪಿ ಸಂಸದ ಗಂಭೀರ್ ಅವರ ಹೇಳಿಕೆಯನ್ನು ದಿಲ್ಲಿ ಬಿಜೆಪಿಯ ಕೆಲವು ಮುಖಂಡರು ಖಂಡಿಸಿದ್ದು ಇದು ಪರೋಕ್ಷವಾಗಿ ಪಕ್ಷದತ್ತ ಬೆರಳು ತೋರಿಸಿದಂತಾಗುತ್ತದೆ ಎಂಬುದನ್ನು ಗಂಭೀರ್ ಅರಿತುಕೊಳ್ಳಬೇಕು ಎಂದಿದ್ದಾರೆ.

ಮೇ 25ರಂದು ಗುರುಗ್ರಾಮದಲ್ಲಿ ತನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿ, ತಾನು ಧರಿಸಿದ್ದ ಟೋಪಿಯನ್ನು ತೆಗೆಯುವಂತೆ ಬೆದರಿಸಿ ‘ಜೈ ಶ್ರೀರಾಮ್’ ಎಂದು ಹೇಳುವಂತೆ ಬಲವಂತಪಡಿಸಿದೆ ಎಂದು 25 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಆರೋಪಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಗುರುಗ್ರಾಮದಲ್ಲಿ ಮುಸ್ಲಿಮ್ ವ್ಯಕ್ತಿಯ ಟೋಪಿ ತೆಗೆಯುವಂತೆ ಬೆದರಿಸಿ ಜೈಶ್ರೀರಾಮ್ ಎಂದು ಹೇಳುವಂತೆ ಬಲವಂತಪಡಿಸಿರುವುದು ದುರದೃಷ್ಟಕರ. ಗುರುಗ್ರಾಮ ಘಟನೆಗೆ ಸೀಮಿತವಾಗಿ ನಾನು ಈ ಹೇಳಿಕೆ ನೀಡುತ್ತಿಲ್ಲ. ನಮ್ಮದು ಜಾತ್ಯಾತೀತ ದೇಶವಾಗಿದ್ದು ಸಹಿಷ್ಣುತೆ ಮತ್ತು ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ ನಮ್ಮ ಧ್ಯೇಯವಾಗಿರಬೇಕು. ಪ್ರಧಾನಿ ಮೋದಿ ಹೇಳಿರುವ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಧ್ಯೇಯವಾಕ್ಯದ ತಿರುಳು ಕೂಡಾ ಇದೇ ಆಗಿದೆ. ಜಾತಿ ಅಥವಾ ಧರ್ಮದ ಆಧಾರದಲ್ಲಿ ದಬ್ಬಾಳಿಕೆ ನಡೆಸುವುದು ಖಂಡನೀಯ ಮತ್ತು ವಿಷಾದನೀಯ ಎಂದು ಹೇಳಿದ್ದಾರೆ.

ಈ ಮಧ್ಯೆ, ಗಂಭೀರ್ ಅವರ ಹೇಳಿಕೆಯ ಬಗ್ಗೆ ದಿಲ್ಲಿ ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಬಿಜೆಪಿಯನ್ನು ಟೀಕಿಸುವ ರೀತಿಯಲ್ಲಿದೆ. ತಾನೀಗ ಕ್ರಿಕೆಟರ್ ಅಲ್ಲ ಎಂಬುದನ್ನು ಗಂಭೀರ್ ಮರೆಯಬಾರದು ಮತ್ತು ತಾನು ಆಡುವ ಮಾತು ಅಥವಾ ಕ್ರಿಯೆಯನ್ನು ರಾಜಕೀಯ ನೆಲೆಯಲ್ಲಿ ಗಮನಿಸುತ್ತಾರೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಇಂತಹ ಘಟನೆಗಳನ್ನು ಯಾರೂ ಒಪ್ಪುವುದಿಲ್ಲ. ಆದರೆ ಹರ್ಯಾಣದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯೆ ನೀಡುವುದರಿಂದ ಇತರ ಪಕ್ಷಗಳಿಗೆ ಬಿಜೆಪಿಯ ವಿರುದ್ಧ ಟೀಕಿಸಲು ಒಂದು ಅಸ್ತ್ರ ದೊರೆತಂತೆ ಆಗುತ್ತದೆ ಎಂದು ದಿಲ್ಲಿ ಬಿಜೆಪಿಯ ಮುಖಂಡರು  ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News