ಮಾಧ್ಯಮಗಳು ವದಂತಿ ಹಬ್ಬಿಸಬಾರದು: ಸುರ್ಜೆವಾಲಾ

Update: 2019-05-27 14:45 GMT

ಹೊಸದಿಲ್ಲಿ, ಮೇ 27: ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ನಡೆಸುವ ಆಂತರಿಕ ಸಭೆಯ ಪಾವಿತ್ರ್ಯತೆಯನ್ನು ಗೌರವಿಸಿ ಮತ್ತು ಕಲ್ಪನೆಯ ಬಲೆಗೆ ಸಿಲುಕಬೇಡಿ ಎಂದು ಕಾಂಗ್ರೆಸ್‌ನ ಮಾಧ್ಯಮ ವಕ್ತಾರ ರಣದೀಪ್ ಸುರ್ಜೆವಾಲಾ ಮಾಧ್ಯಮಗಳನ್ನು ಆಗ್ರಹಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶೋಚನೀಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಹುದ್ದೆ ತ್ಯಜಿಸುವ ರಾಹುಲ್ ಗಾಂಧಿ ನಿರ್ಧಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಮ್ಮತದಿಂದ ವಿರೋಧಿಸಿದರೂ ರಾಹುಲ್ ತಮ್ಮ ನಿರ್ಧಾರಕ್ಕೆ ಬಲವಾಗಿ ಅಂಟಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಸುರ್ಜೆವಾಲಾ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆಂತರಿಕ ಸಭೆಯ ಪಾವಿತ್ರತೆಯನ್ನು ಮಾಧ್ಯಮ ಗಳ ಸಹಿತ ಎಲ್ಲರೂ ಗೌರವಿಸಬೇಕೆಂದು ಕಾಂಗ್ರೆಸ್ ನಿರೀಕ್ಷಿಸುತ್ತಿದೆ. ವಿವಿಧ ಊಹೆಗಳು, ಪ್ರಚೋದಿತ ಆರೋಪ, ಗಾಳಿ ಸುದ್ದಿ, ವದಂತಿಯನ್ನು ಕೆಲವು ಮಾಧ್ಯಮಗಳು ಹಬ್ಬಿಸುತ್ತಿದ್ದು ಇದು ನಿರಾಧಾರ, ಅನವಶ್ಯಕ ಮತ್ತು ಅನಪೇಕ್ಷಿತವಾಗಿದೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದೆ. ಅಲ್ಲದೆ ಪಕ್ಷದ ಎದುರಿಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಯಿತು. ಪಕ್ಷದ ಹಿನ್ನಡೆಗೆ ಯಾವುದೇ ವ್ಯಕ್ತಿಯ ವೈಯಕ್ತಿಕ ವೈಫಲ್ಯ ಹೊಣೆಯಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಆಗಿರುವ ಹಿನ್ನಡೆಯನ್ನು ಪಕ್ಷದ ಸಂಘಟನೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಲು ಬಳಸಿಕೊಳ್ಳಲು ರಾಹುಲ್ ಗಾಂಧಿಗೆ ಸಭೆ ಅಧಿಕಾರ ನೀಡಿದೆ ಎಂದು ಸುರ್ಜೆವಾಲಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News