ದಿಕ್ಕೆಟ್ಟಿರುವ ಕಾಂಗ್ರೆಸ್‌ನಲ್ಲಿ ಎಲ್ಲರೂ ನಾಯಕರೇ, ಕಾರ್ಯಕರ್ತರಿಲ್ಲ: ಶಿವಸೇನೆ ಟೀಕೆ
ಹೊಸದಿಲ್ಲಿ, ಮೇ 27: ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನ, ಎನ್‌ಡಿಎ ಮೈತ್ರಿಕೂಟ 352 ಸ್ಥಾನ ಗೆದ್ದಿರುವುದನ್ನು ಉಲ್ಲೇಖಿಸಿರುವ ಶಿವಸೇನೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವ್ಯಕ್ತಿತ್ವ ಮತದಾರರನ್ನು ಆಕರ್ಷಿಸುತ್ತಿಲ್ಲ ಎಂದಿದೆ.
ಪಕ್ಷದ ಮುಖವಾಣಿ ‘ಸಾಮ್ನ’ದಲ್ಲಿ ಸೋಮವಾರ ಬರೆದಿರುವ ಸಂಪಾದಕೀಯದಲ್ಲಿ ಕಾಂಗ್ರೆಸ್ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಲಾಗಿದ್ದು, ‘‘ಕಾಂಗ್ರೆಸ್ ಪಕ್ಷ ದಿಕ್ಕೆಟ್ಟಿದೆ. ಆ ಪಕ್ಷದಲ್ಲಿ ಎಲ್ಲರೂ ನಾಯಕರೇ, ಕಾರ್ಯಕರ್ತರು ಯಾರೂ ಇಲ್ಲ. ರಾಹುಲ್ ಗಾಂಧಿ ಯ ಮಾತುಗಳು ಜನರ ಮೇಲೆ ಪ್ರಭಾವ ಬೀರುತ್ತಿಲ್ಲ’’ ಎಂದು ಬರೆಯಲಾಗಿದೆ.
ರಾಹುಲ್ ಗಾಂಧಿ ಮೋತಿಲಾಲ್ ಅಥವಾ ಜವಾಹರಲಾಲ್ ನೆಹರೂ ಅಲ್ಲ. ಅವರು ಇಂದಿರಾ ಗಾಂಧಿಯೂ ಅಲ್ಲ, ರಾಜೀವ ಗಾಂಧಿಯೂ ಅಲ್ಲ. ಅವರು ಕೇವಲ ಸೋನಿಯಾ ಗಾಂಧಿಯ ಪುತ್ರ. ಅವರ ಭಾಷಣಗಳು ಜನರ ಮೇಲೆ ಪ್ರಭಾವ ಬೀರುತ್ತಿಲ್ಲ ಎಂದು ‘ಕಾಂಗ್ರೆಸ್ ಪಕ್ಷಕ್ಕೆ ಏನಾಗಲಿದೆ ಎಂಬುದೇ ಪ್ರಶ್ನೆಯಾಗಿದೆ’ ಎಂಬ ಶೀರ್ಷಿಕೆಯ ಬರಹದಲ್ಲಿ ಹೇಳಲಾಗಿದೆ.
ಬಿಜೆಪಿಗೆ ಅಮಿತ್ ಶಾರ ಸಂಘಟನಾ ಚಾತುರ್ಯದ ಬಲವಿದೆ. ಆದರೆ ರಾಹುಲ್ ಗಾಂಧಿ ಬಾಲಿಷ ವರ್ತನೆಯ ನಾಯಕರಿಂದ ಅಥವಾ ಪಿಂಚಣಿದಾರರ ಕೂಟದಿಂದ ಸುತ್ತುವರಿಯಲ್ಪಟ್ಟಿದ್ದಾರೆ. ರಾಹುಲ್ ಗಾಂಧಿ ಗರಿಷ್ಟ ಪ್ರಯತ್ನ ನಡೆಸಿದ್ದರೂ ಅವರಿಗೆ ಚಿದಂಬರಂ, ಕಮಲನಾಥ್, ಅಶೋಕ್ ಗೆಹ್ಲೋಟ್ ಸೇರಿದಂತೆ ಹಿರಿಯ ನಾಯಕರ ಬೆಂಬಲವಿಲ್ಲ ಎಂದಿದೆ.
ಪ್ರಿಯಾಂಕಾ ಗಾಂಧಿ ಕೂಡಾ ಮತದಾರರ ಮೇಲೆ ಯಾವುದೇ ಪ್ರಭಾವ ಬೀರಲು ವಿಫಲರಾಗಿದ್ದಾರೆ. 2014ರಲ್ಲಿ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ 2 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ರಾಹುಲ್ ಅಮೇಥಿ ಕ್ಷೇತ್ರದಲ್ಲಿ ಸೋತಿದ್ದು ಕಾಂಗ್ರೆಸ್ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ರಾಹುಲ್ ಗಾಂಧಿ ರಾಜೀನಾಮೆಯ ಕೊಡುಗೆ ನೀಡಿದಾಗ ಅದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತಿರಸ್ಕರಿಸಿದೆ. ಅಂದರೆ ಕಾಂಗ್ರೆಸ್‌ಗೆ ಬೇರೆ ಆಯ್ಕೆಯೇ ಇಲ್ಲ. ಪಕ್ಷವನ್ನು ಮುನ್ನಡೆಸುವ ಬಲಿಷ್ಟ ನಾಯಕನ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ಮುಂದೇನಾಗಬಹುದು ಎಂಬುದೇ ಈಗಿರುವ ಪ್ರಶ್ನೆಯಾಗಿದೆ ಎಂದು ಶಿವಸೇನೆ ಹೇಳಿದೆ.