ಪೂರ್ಣಗೊಳ್ಳುವ ಹಂತದಲ್ಲಿ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ

Update: 2019-05-27 15:48 GMT

ಉಳ್ಳಾಲ: ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ಕಳೆದ ಒಂಭತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಇದೀಗ ಕಾಮಗಾರಿ ಶೇ.90 ರಷ್ಟು ತಲುಪಿದೆ. ಜೂ.5 ಕ್ಕೆ ಸಂಚಾರ ಮುಕ್ತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಅವೈಜ್ಞಾನಿಕವಾಗಿ ಕಂಡುಬರುವ ಕಾಮಗಾರಿಯಿಂದ ವಾಹನ ಸವಾರರಿಗೆ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. 

ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ 2010 ರಲ್ಲಿ ಮಂಜೂರುಗೊಂಡು ಆಮೆಗತಿಯಲ್ಲಿ ಸಾಗುತಿತ್ತು. ಚುನಾವಣೆಗೆ ಕೆಲ ತಿಂಗಳ  ಹಿಂದೆ ವಿರೋಧ ಪಕ್ಷಗಳ, ಸಂಘಟನೆಗಳ ಪ್ರತಿಭಟನೆಯಿಂದಾಗಿ ತುಸು ವೇಗವನ್ನು ಪಡೆದುಕೊಂಡಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಪದೇ ಪದೇ ಉದ್ಘಾಟನೆಗೆ ದಿನಾಂಕ ನೀಡುವ ಮುಖೇನ ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದ್ದರು. ಇದೀಗ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ. ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯ ಪ್ರಾಜೆಕ್ಟ್ ಮೆನೇಜರ್ ಅವರ ನಿರ್ದೇಶನದ ಪ್ರಕಾರ ಜೂ.5 ರಿಂದ  ಸಂಚಾರಕ್ಕೆ ಮುಕ್ತವಾಗಲಿದೆ. 

ಉಳ್ಳಾಲ ಓವರ್ ಬ್ರಿಡ್ಜ್ ಭಾಗದಲ್ಲಿ ಭಾಗಶ: ಕಾಮಗಾರಿ ಪೂರ್ಣಗೊಂಡು, ರಸ್ತೆಗೆ ಡಾಮರೀಕರಣ ಮಾತ್ರ ಬಾಕಿಯಿದೆ. ಕಲ್ಲಾಪು ಭಾಗದಲ್ಲಿ ಇನ್ನೂ ಸೇತುವೆ ಬದಿ ದಂಡೆಗಳ ನಿರ್ಮಾಣ ಮತ್ತು ಫ್ಲೈಓವರ್ ಇಳಿಯುವ ಜಾಗದಲ್ಲಿ  ಅಂತಿಮ ಹಂತದ ಕಾಮಗಾರಿ ನಡೆಯುತ್ತಿದೆ. ಗುತ್ತಿಗೆ ಕಂಪೆನಿ ಅಂದುಕೊಂಡಂತೆ ಕಾಮಗಾರಿ ನಿರ್ವಹಿಸಿದಲ್ಲಿ ಜೂ.5 ಕ್ಕೆ  ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.  

ಅಪಾಯಕಾರಿ ರಸ್ತೆ: ತೊಕ್ಕೊಟ್ಟು ಓವರ್ ಬ್ರಿಡ್ಜ್  ಫ್ಲೈಓವರ್ ಇಳಿಯುವ  ಪ್ರದೇಶದಲ್ಲೇ ಉಳ್ಳಾಲದಿಂದ ತೊಕ್ಕೊಟ್ಟು ಹಾದುಹೋಗುವ ರಸ್ತೆಯಿದೆ.  ಫ್ಲೈಓವರ್ ನಿಂದ ವೇಗವಾಗಿ  ವಾಹನಗಳು ಇಳಿಯುವ ಸಮಯದಲ್ಲಿ ಉಳ್ಳಾಲ ಕಡೆಯಿಂದ ತೆರಳುವ ವಾಹನಗಳು ಅಡ್ಡವಾಗಿ ಹಾದು ಹೋದಲ್ಲಿ ಅವಘಡ ನಡೆಯುವ ಸಾಧ್ಯತೆ ಇದೆ.  ಫ್ಲೈಓವರ್ ರಸ್ತೆಯ ಕಲ್ಲಾಪು ಭಾಗದಲ್ಲಿ ಒಂದು ಮುಖವಿದ್ದರೆ, ಇನ್ನೊಂದು ಭಾಗ ಕಾಪಿಕಾಡಿನಲ್ಲಿ ಮುಕ್ತಾಯಗೊಳ್ಳುವ  ಯೋಜನೆ ರೂಪಿಸಲಾಗಿತ್ತು. ಆದರೆ ಇದೀಗ ಏಕಾಏಕಿ ಯೋಜನೆ ಬದಲಾಗಿದ್ದು, ಹಣದ ಕೊರತೆಯೋ, ತೊಕ್ಕೊಟ್ಟು ವ್ಯಾಪಾರಸ್ಥರಿಗೆ ವ್ಯಾಪಾರ ಆಗುವ ಉದ್ದೇಶದಿಂದಲೂ ಓವರ್ ಬ್ರಿಡ್ಜ್ ಸಮೀಪವೇ ಫ್ಲೈಓವರ್ ಮುಕ್ತಾಯವಾಗುತ್ತಿದೆ. ಅಪಾಯದ ಕುರಿತು ಇಂಜಿನಿಯರ್ ಗಳು ಹೇಳುವಂತೆ ಅಪಘಾತ ತಡೆಗಟ್ಟಲು ಉಳ್ಳಾಲ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್, ಸಿಗ್ನಲ್ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಅಳವಡಿಸುವ ಯೋಜನೆಯಿದೆ ಅನ್ನುತ್ತಾರೆ.  ಆದರೆ ತಡರಾತ್ರಿಗಳಲ್ಲಿ  ಅವೆಲ್ಲದರ ಕಾರ್ಯಾಚರಣೆ ಅಸಾಧ್ಯ. ಈ ವೇಳೆ ಅಪಘಾತಗಳು ನಡೆಯುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ. 

ಕಾಮಗಾರಿ ಸಂದರ್ಭ ಅಪಘಾತ:  ರಾಷ್ಟ್ರೀಯ ಹೆದ್ದಾರಿ 66 ರಿಂದ ಉಳ್ಳಾಲಕ್ಕೆ ತಿರುವು ರಸ್ತೆಯಲ್ಲಿ ಕಾಮಗಾರಿ ಸಂದರ್ಭವೂ ಏಕಮುಖ ಸಂಚಾರ ಮಾಡಿರುವುದರಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಶುಕ್ರವಾರ ತಡರಾತ್ರಿ ಸ್ಕಾರ್ಪಿಯೋ ವಾಹನ ಢಿಕ್ಕಿ ಹೊಡೆದು ಉಳ್ಳಾಲ ಶ್ರೀ ಚೀರುಂಭ ಭಗವತಿ ದೇವಸ್ಥಾನದ  ಸುಂದರ್ ಎಂಬವರು ಅಪಘಾತಕ್ಕೀಡಾಗಿ ಕಾಲು ಮುರಿತಕ್ಕೆ ಒಳಗಾಗಿದ್ದಾರೆ.

ಈ ಅಪಾಯಕಾರಿ ಸಮಸ್ಯೆಯ ಬಗ್ಗೆ ಕೂಡಲೇ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸ್ಥಳೀಯರು, ಗುತ್ತಿಗೆ ನಿರ್ವಹಿಸುತ್ತಿರುವ ಕಂಪೆನಿ ಹಾಗೂ ಸಾರ್ವಜನಿಕರು  ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಈ ಪ್ರದೇಶ ಭವಿಷ್ಯದಲ್ಲಿ ಅಪಘಾತ ವಲಯವಾಗಿ ಮಾರ್ಪಟಾಗಲಿದೆ ಎನ್ನುತ್ತಾರೆ ನಗರಸಭೆ ಸದಸ್ಯ ರವಿಚಂದ್ರ ಗಟ್ಟಿ ಅವರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News