ಅಸ್ಸಾಮಿನಿಂದ ರಾಜ್ಯಸಭಾ ಸದಸ್ಯತ್ವದ ಯೋಗ ಕಳೆದುಕೊಂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

Update: 2019-05-27 16:36 GMT

ಗುವಾಹಟಿ,ಮೇ 27: 1991ರಿಂದಲೂ ರಾಜ್ಯಸಭೆಯಲ್ಲಿ ಅಸ್ಸಾಮನ್ನು ಪ್ರತಿನಿಧಿಸುತ್ತಿರುವ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಇನ್ನು ಮುಂದೆ ಆ ಭಾಗ್ಯವನ್ನು ಕಳೆದುಕೊಳ್ಳಲಿದ್ದಾರೆ. ಸಿಂಗ್ ಮತ್ತು ಅಸ್ಸಾಮಿನ ಇನ್ನೋರ್ವ ರಾಜ್ಯಸಭಾ ಸದಸ್ಯ ಸ್ಯಾಂತಿಯೂಸ್ ಕುಜೂರ್ ಅವರು ಮುಂಬರುವ ಜೂನ್ 4ರಂದು ನಿವೃತ್ತರಾಗಲಿದ್ದಾರೆ. ಈ ಬಾರಿ ರಾಜ್ಯಸಭೆಗೆ ಅಸ್ಸಾಮಿನಿಂದ ಸಿಂಗ್ ಅವರನ್ನು ನಾಮಕರಣ ಮಾಡದಿರಲು ಕಾಂಗ್ರೆಸ್ ನಿರ್ಧರಿಸಿದೆ.

ಕಾಂಗ್ರೆಸ್ ಈ ಬಾರಿ ಯಾರನ್ನೂ ನಾಮಕರಣ ಮಾಡದಿರಲು ನಿರ್ಧರಿಸಿದೆ. ಏಕೆಂದರೆ ವಿಧಾನಸಭೆಯಲ್ಲಿ ಅಗತ್ಯ ಸಂಖ್ಯೆಯ ಶಾಸಕರನ್ನು ನಾವು ಹೊಂದಿಲ್ಲ ಎಂದು ಅಸ್ಸಾಂ ಕಾಂಗ್ರೆಸ್‌ನ ಹಿರಿಯ ವಕ್ತಾರ ಅಪೂರ್ವ ಕುಮಾರ ಭಟ್ಟಾಚಾರ್ಯ ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ತಾನು ಅಗತ್ಯ ಸಂಖ್ಯೆಯ ಶಾಸಕರನ್ನು ಹೊಂದಿರುವ ಬೇರೊಂದು ರಾಜ್ಯದಿಂದ ಸಿಂಗ್ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿಸುವ ಸಾಧ್ಯತೆಯಿದೆ.

126 ಸದಸ್ಯಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಪಕ್ಷವು 87 ಸ್ಥಾನಗಳನ್ನು ಹೊಂದಿದ್ದರೆ,ಕಾಂಗ್ರೆಸ್ ಕೇವಲ 25 ಶಾಸಕರನ್ನು ಹೊಂದಿದೆ. ಐಐಯುಡಿಎಫ್‌ನ 12 ಶಾಸಕರಿದ್ದರೆ,ಏಕೈಕ ಪಕ್ಷೇತರ ಶಾಸಕ ಆಡಳಿತ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಆಯ್ಕೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿಯ ಎರಡೂ ರಾಜ್ಯಸಭಾ ಸ್ಥಾನಗಳು ಈ ಬಾರಿ ಆಡಳಿತ ಪಕ್ಷದ ಪಾಲಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ.

ಸಿಂಗ್ ಈ ವರೆಗೆ ಸತತ ಐದು ಅವಧಿಗೆ ಅಸ್ಸಾಮಿನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News