ಇನ್ನೂ ಮೂವರು ಪಿಸಿಸಿ ಅಧ್ಯಕ್ಷರಿಂದ ರಾಹುಲ್‌ಗೆ ರಾಜೀನಾಮೆ ರವಾನೆ

Update: 2019-05-27 16:40 GMT

ಹೊಸದಿಲ್ಲಿ,ಮೇ 27: ಪಂಜಾಬ್,ಜಾರ್ಖಂಡ್ ಮತ್ತು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ತಮ್ಮ ರಾಜೀನಾಮೆಗಳನ್ನು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದು,ಇದರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ಬಳಿಕ ಹುದ್ದೆಯನ್ನು ತೊರೆದ ರಾಜ್ಯ ಕಾಂಗ್ರೆಸ್ ವರಿಷ್ಠರ ಸಂಖ್ಯೆ ಆರಕ್ಕೇರಿದೆ.

ಉತ್ತರ ಪ್ರದೇಶ,ಒಡಿಶಾ ಮತ್ತು ಮಹಾರಾಷ್ಟ್ರ ಪಿಸಿಸಿಗಳ ಅಧ್ಯಕ್ಷರಾದ ರಾಜ್ ಬಬ್ಬರ್,ನಿರಂಜನ ಪಟ್ನಾಯಕ್ ಮತ್ತು ಅಶೋಕ ಚವ್ಹಾಣ್ ಅವರು ಈಗಾಗಲೇ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.

ಪಂಜಾಬಿನಲ್ಲಿ ಒಟ್ಟು 13 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಉತ್ತಮ ಸಾಧನೆಯನ್ನು ಪ್ರದರ್ಶಿಸಿದೆಯಾದರೂ ಗುರುದಾಸಪುರದಲ್ಲಿ ಬಿಜೆಪಿಯ ಸನ್ನಿ ದೇವಲ್ ಎದುರು ತನ್ನ ಪರಾಭವದ ನೈತಿಕ ಹೊಣೆಯನ್ನು ವಹಿಸಿಕೊಂಡಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುನಿಲ ಜಾಖಡ್ ಅವರು ತನ್ನ ರಾಜೀನಾಮೆಯನ್ನು ರಾಹುಲ್‌ಗೆ ಮೇಲ್ ಮಾಡಿದ್ದಾರೆ.

ರಾಜ್ಯದಲ್ಲಿಯ ಒಟ್ಟು 14 ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನವನ್ನು ಗೆದ್ದಿರುವ ಪಕ್ಷದ ಕಳಪೆ ಸಾಧನೆಯ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಜಾರ್ಖಂಡ್ ಪಿಸಿಸಿ ಅಧ್ಯಕ್ಷ ಅಜಯ ರಾಯ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಅತ್ತ ಅಸ್ಸಾಂ ಪಿಸಿಸಿ ಅಧ್ಯಕ್ಷ ರಿಪುನ್ ಬೋರಾ ಅವರೂ ರಾಜೀನಾಮೆ ಸಲ್ಲಿಸಿದ್ದು,ಅಸ್ಸಾಮಿನಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರಣಗಳೇನೇ ಇರಲಿ,ಹುದ್ದೆಯಲ್ಲಿ ಮುಂದುವರಿಯಲು ತನ್ನ ಮನಸ್ಸಾಕ್ಷಿ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News