ಸರಕಾರ ರಚನೆಗೆ ಪರದಾಡುತ್ತಿರುವ ಇಸ್ರೇಲ್ ಪ್ರಧಾನಿ ನೆತನ್ಯಾಹು
ಜೆರುಸಲೇಮ್, ಮೇ 27: ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಬಳಿಕ, ಮೈತ್ರಿ ಸರಕಾರವೊಂದನ್ನು ರಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪರದಾಡುತ್ತಿದ್ದಾರೆ. ಮೈತ್ರಿ ಕುದುರಿಸುವುದಕ್ಕಾಗಿ ನಿಗದಿಯಾಗಿರುವ ಬುಧವಾರದ ಗಡುವಿಗೆ ಮುನ್ನ ‘ಕೊನೆಯ ಪ್ರಯತ್ನ’ವೊಂದನ್ನು ಮಾಡಲು ಅವರು ರವಿವಾರ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ದಶಕದಿಂದ ಅಧಿಕಾರದಲ್ಲಿರುವ ನೆತನ್ಯಾಹು, ಬಲಪಂಥೀಯ, ಕಡು ಬಲಪಂಥೀಯ ಹಾಗೂ ಅತಿ ಸಂಪ್ರದಾಯವಾದಿ ಯಹೂದಿ ಪಕ್ಷಗಳ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಅನಿರೀಕ್ಷಿತ ತಡೆಗಳನ್ನು ಎದುರಿಸುತ್ತಿದ್ದಾರೆ. ಎಪ್ರಿಲ್ 9ರಂದು ಇಸ್ರೇಲ್‌ನಲ್ಲಿ ಚುನಾವಣೆ ನಡೆದಿದ್ದು, ನೆತನ್ಯಾಹು ಐದನೇ ಬಾರಿಗೆ ಪ್ರಧಾನಿಯಾಗಿ ಮರಳಬೇಕಾದರೆ ಈ ಪಕ್ಷಗಳು ಅವರ ಲಿಕುಡ್ ಪಕ್ಷದೊಂದಿಗೆ ಮೈತ್ರಿ ಏರ್ಪಡಿಸಿಕೊಳ್ಳಬೇಕಾಗಿದೆ.
ಸೇನೆಗೆ ಕಡ್ಡಾಯ ಸೇರ್ಪಡೆ ಮಸೂದೆಯಲ್ಲಿ ಅತಿ ಸಂಪ್ರದಾಯವಾದಿ ಯಹೂದಿ ಧಾರ್ಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ ವಿಷಯದಲ್ಲಿ ಮಾಜಿ ರಕ್ಷಣಾ ಸಚಿವ ಅವಿಗ್ಡರ್ ಲೈಬರ್‌ಮನ್‌ರ ಅತಿ ರಾಷ್ಟ್ರೀಯವಾದಿ ಯಿಸ್ರೇಲ್ ಬೈಟೆನು ಪಕ್ಷ ಮತ್ತು ಯುನೈಟೆಡ್ ತೋರಾ ಜುಡಾಯಿಸಂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಗಳಿಂದಾಗಿ ಮೈತ್ರಿಕೂಟದ ಮಾತುಕತೆಗಳು ಬಿಕ್ಕಟ್ಟಿಗೆ ಸಿಲುಕಿವೆ.
ಈ ಮಾತುಕತೆಗಳು ಯಶಸ್ವಿಯಾಗದಿದ್ದರೆ, ಅಂತಿಮವಾಗಿ ಇಸ್ರೇಲ್ ಮರುಚುನಾವಣೆಯತ್ತ ಸಾಗುವ ಸಾಧ್ಯತೆಯಿದೆ.