×
Ad

ಮಾಡೂರು: ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2019-05-27 22:57 IST

ಉಳ್ಳಾಲ,ಮೇ.27: ಸಹಕಾರಿ ಸಂಘಗಳು ಸಾಮಾಜಿಕ ಕಾಳಜಿಯೊಂದಿಗೆ ಆರೋಗ್ಯ ವಿಚಾರದಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. 

ಅವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಮಾಡೂರು ಶಾಖೆ, ಶ್ರೀ ಕೊರಗಜ್ಜ ಸೇವಾ ಸಮಿತಿ  ಮಾಡೂರು ಕೋಟೆಕಾರು, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಸಮುದಾಯ ದಂತ ವಿಭಾಗ ಯೆನೆಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಜ್ಜೋಡಿ ಮಂಗಳೂರು ಇಲ್ಲಿಯ ನುರಿತ ವೈದ್ಯರ ತಂಡದವರಿಂದ ಸಂಘದ ಮಾಡೂರು ಶಾಖೆಯ ವಠಾರದಲ್ಲಿ ನಡೆದ 25ನೇ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ,ದಂತ ತಪಾಸಣಾ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ಮತ್ತು 25 ವೈದ್ಯಕೀಯ ಶಿಬಿರಗಳಲ್ಲಿ ಸಹಕರಿಸಿದ ಸಂಸ್ಥೆಗಳಿಗೆ ಹಾಗೂ ವೈದ್ಯರಿಗೆ ಗೌರವಾರ್ಪಣೆ ನೆರವೇರಿಸಿ ಮಾತನಾಡಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೆನ್ಲಾಕ್ ಆಸ್ಪತ್ರೆಯ ಮೂಳೆ ತಜ್ಞ ಡಾ. ಸದಾನಂದ ಪೂಜಾರಿ ಮಾತನಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳು ವೆನ್ಲಾಕ್ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ಸರಕಾರಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು. 

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಸಂಘವು  ಸತತವಾಗಿ 7 ವರ್ಷಗಳಿಂದ  ಜಿಲ್ಲೆಯ ಪ್ರಸಿದ್ಧ ಆಸ್ಪತ್ರೆಗಳ ಸಹಯೋಗದೊಂದಿಗೆ ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಶಿಬಿರ,ಉಚಿತ ಔಷದ ವಿತರಣೆ, ಉಚಿತ ಕನ್ನಡಕ ವಿತರಣೆ, 3000ಕ್ಕೂ ಹೆಚ್ಚು ಸದಸ್ಯರಿಗೆ ಆರೋಗ್ಯ ಕಾರ್ಡನ್ನು ನೀಡಲಾಗಿದೆ.  ತನ್ನ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ತನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತೀ ವರ್ಷ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾಹಿತಿ ಕಾರ್ಯಗಾರವನ್ನು ಏರ್ಪಡಿಸುತ್ತಿದ್ದು ಆಯ್ಕೆ ಆದ ಬಡ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯ ದಾನಿಗಳ ಮೂಲಕ ನಿರಂತರ ಉಚಿತ ಶಿಕ್ಷಣವನ್ನು ನೀಡುವ ಯೋಜನೆ ಕೂಡ ರೂಪಿಸಲಾಗಿದೆ. ಇದರೊಂದಿಗೆ ಸಂಘವು ಪ್ರಾದೇಶಿಕ ಸಹಕಾರ ತರಬೇತಿ ಕೇಂದ್ರ  ಬೆಂಗಳೂರು ಇವರ ಸಹಯೋಗದೊಂದಿಗೆ 'ಹೈಯರ್ ಡಿಪ್ಲೋಮ ಇನ್ ಕೋಪರೇಟಿವ್ ಮ್ಯಾನೇಜ್‍ಮೆಂಟ್(ಎಚ್.ಡಿ.ಸಿ.ಎಂ) ದೂರಶಿಕ್ಷಣ ಕೋರ್ಸನ್ನು ಎರಡು ವರ್ಷದಿಂದ ನಡೆಸುತ್ತಾ ಬಂದಿದೆ ಎಂದರು.  

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದ್ರಾಜೆ ಶ್ರೀನಿವಾಸ್, ಮಾತಾ ಅಮೃತಾನಂದಮಯಿ ಮಠದ ವೈದ್ಯೆ ಡಾ. ಸುಚಿತ್ರ ಸೊರಕೆ, ಡಾ. ದೇವದಾಸ್,ಯೆನಪೊಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಸಮುದಾಯ ದಂತ ವಿಭಾಗ ರೀಡರ್ ಡಾ. ಲಕ್ಷೀನಾರಾಯಣ ಸೊಂದೆ, ಶಿರಡಿ ಸಾಯಿ ಮಂದಿರ ಮಾಡುರು ಇದರ ಅಧ್ಯಕ್ಷ ಕೆ.ಪಿ ಸುರೇಶ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ನಿರ್ದೇಶಕರುಗಳಾದ ವಾಮನ್ ಕೆ, ಪರಮೇಶ್ವರ ಪೂಜಾರಿ, ಆನಂದ ಎಸ್.ಕೊಂಡಾಣ, ಸೀತಾರಾಮ್ ಎನ್,  ಸುರೇಶ್ ಪೂಜಾರಿ, ಚಂದ್ರಹಾಸ್ ಮರೋಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 25 ವೈದ್ಯಕೀಯ ಶಿಬಿರಗಳಲ್ಲಿ ಸಹಕರಿಸಿದ ಆಸ್ಪತ್ರೆಗಳು, ಸಂಘ ಸಂಸ್ಥೆಗಳು, ವೈದ್ಯರು, ಮತ್ತು ಸಂಘಟಕರನ್ನು ಸನ್ಮಾನಿಸಲಾಯಿತು. 

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಲೆಕ್ಕಾಧಿಕಾರಿ ವಿಶ್ವನಾಥ ಸ್ವಾಗತಿಸಿದರು. ಸಂಘದ ಶಾಖಾಧಿಕಾರಿ ಸೌಮ್ಯಲತಾ ಕಾರ್ಯಕ್ರಮ ನಿರೂಪಿಸಿದರು. ಸಂಘದ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News