ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಜಿನಿಕಾಂತ್, ಕಮಲ್‌ ಹಾಸನ್‌ಗೆ ಆಹ್ವಾನ

Update: 2019-05-27 17:33 GMT

ಚೆನ್ನೈ, ಮೇ 27: ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮೇ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಮುಖ ಸಿನೆಮ ನಟರಾದ ರಜಿನಿಕಾಂತ್ ಹಾಗೂ ಕಮಲ್ ಹಾಸನ್‌ಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ಆದರೆ ಪಾಲ್ಗೊಳ್ಳುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ ಎಂದು ರಜಿನಿಕಾಂತ್ ಮತ್ತು ಕಮಲಹಾಸನ್ ಅವರ ಆಪ್ತರು ತಿಳಿಸಿದ್ದಾರೆ. ಇಬ್ಬರು ನಟರೂ ತಮಿಳುನಾಡಿನಲ್ಲಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಎಂಎನ್‌ಎಂ ಪಕ್ಷ ಸ್ಪರ್ಧಿಸಿತ್ತು. ರಜಿನಿಕಾಂತ್ ತಮ್ಮ ಪಕ್ಷದ ಹೆಸರನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕಳೆದ ಬಾರಿ ಚೆನ್ನೈಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾಗ ಅವರನ್ನು ರಜಿನಿಕಾಂತ್ ಭೇಟಿಯಾಗಿದ್ದರು.

ಕಮಲ್ ಹಾಸನ್ ಬಿಜೆಪಿಯ ಕಡು ವಿರೋಧಿಯಾಗಿದ್ದಾರೆ. ದೇಶದ ಪ್ರಥಮ ಭಯೋತ್ಪಾದಕ ಹಿಂದೂ ಎಂದು ನಾಥೂರಾಮ್ ಗೋಡ್ಸೆಯನ್ನು ಉಲ್ಲೇಖಿಸಿ ಅವರು ನೀಡಿದ್ದ ಹೇಳಿಕೆಯನ್ನು ರಾಜ್ಯ ಬಿಜೆಪಿ ಖಂಡಿಸಿತ್ತು ಮತ್ತು ಕಮಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News