×
Ad

ಪಡುಬಿದ್ರಿ: ನಾಪತ್ತೆಯಾದ ದ್ವಿಚಕ್ರ ವಾಹನ ಹುಡುಕಾಡಿ ಸುಸ್ತಾದ ಪೊಲೀಸರು!

Update: 2019-05-27 23:14 IST
ಸಾಂದರ್ಭಿಕ ಚಿತ್ರ

ಪಡುಬಿದ್ರಿ, ಮೇ 27: ಒಂದೇ ಬಣ್ಣದ ದ್ವಿಚಕ್ರ ವಾಹನಗಳು ಅದಲು-ಬದಲಾಗಿ, ‘ನಾಪತ್ತೆ’ಯಾದ ದ್ವಿಚಕ್ರ ವಾಹನಕ್ಕಾಗಿ ಪೊಲೀಸರು ಹುಡುಕಾಡಿ ಸುಸ್ತಾದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.

ಪಡುಬಿದ್ರೆ ಗ್ರಾಪಂ ಸದಸ್ಯ ಹಸನ್‍ ಬಾವ ಎಂಬವರು ಬೆಳಗ್ಗೆ 10:30ರ ವೇಳೆಗೆ ಬ್ಯಾಂಕ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ತೆರಳಿದ್ದರು. ಬ್ಯಾಂಕ್‍ ನಿಂದ ಹಿಂದಿರುಗಿ ಬಂದಾಗ ಸ್ಕೂಟರ್ ಅಲ್ಲಿಂದ ನಾಪತ್ತೆಯಾಗಿತ್ತು. ಕೂಡಲೇ ಪಡುಬಿದ್ರೆ ಪೊಲೀಸ್ ಠಾಣೆಗೆ ಹಸನ್ ಮಾಹಿತಿ ನೀಡಿದರು. ಪೊಲೀಸ್ ತಂಡ ಬ್ಯಾಂಕ್ ಮುಂಭಾಗದಲ್ಲಿ ಹುಡುಕಾಡಿ ಪೇಟೆಯ ವಿವಿಧೆಡೆ ಇರುವ ಸಿಸಿ ಕ್ಯಾಮರಾಗಳ ಫೂಟೇಜ್ ಗಳನ್ನು ಪರಿಶೀಲನೆ ನಡೆಸಿತು.

ಕಾರ್ಕಳ ರಸ್ತೆಯಲ್ಲಿನ ಸೊಸೈಟಿಯೊಂದರ ಸಿಸಿ ಕ್ಯಾಮರಾದಲ್ಲಿ ಸ್ಕೂಟರ್ ನಲ್ಲಿ ಪಡುಬಿದ್ರೆ ಪೇಟೆ ಕಡೆ ವ್ಯಕ್ತಿಯೊಬ್ಬರು ಸಂಚರಿಸುತ್ತಿರುವುದು ದಾಖಲಾಗಿತ್ತು. ಅದರ ಆಧಾರದಂತೆ ಕಾರ್ಕಳ ರಸ್ತೆಯ ಹೋಟೆಲ್ ಮುಂಭಾಗದಲ್ಲಿ ಪರಿಶೀಲಿಸಿದಾಗ ಅಲ್ಲಿ ಸ್ಕೂಟರ್ ಪತ್ತೆಯಾಯಿತು. ಆದರೆ ಸ್ಕೂಟರ್, ಅದರಲ್ಲಿದ್ದ ದಾಖಲೆಗಳ ಸಹಿತ ಎಲ್ಲ ವಸ್ತುಗಳು ಯಥಾಸ್ಥಿತಿಯಲ್ಲಿತ್ತು.

ಅದಲು-ಬದಲಾದ ಸ್ಕೂಟರ್

ಒಂದೇ ಬಣ್ಣದ ದ್ವಿಚಕ್ರ ವಾಹನವನ್ನು ಒಂದೇ ಕಡೆ ನಿಲ್ಲಿಸಿದ್ದರಿಂದ ಈ ಎಡವಟ್ಟು ನಡೆದಿತ್ತು. ಇನ್ನೊಂದು ದ್ವಿಚಕ್ರ ವಾಹನ ಸವಾರ ಅವಸರದಲ್ಲಿ ತನ್ನದೆಂದು ಹಸನ್ ಬಾವರ ದ್ವಿಚಕ್ರ ವಾಹನ ಕೊಂಡು ಹೋಗಿದ್ದರು. ಕೊನೆಗೆ ಇದು ತನ್ನದಲ್ಲ ಎಂದು ತಿಳಿದಾಗ ಅದನ್ನು ಅಲ್ಲಿಯೇ ನಿಲ್ಲಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಈ ಅದಲು-ಬದಲಿನಿಂದ ಪೊಲೀಸರು ಮಾತ್ರ ಹುಡುಕಾಡಿ ಸುಸ್ತಾದರು. ಆದರೆ ಎರಡೂ ದ್ವಿಚಕ್ರ ವಾಹನಗಳಲ್ಲಿ ಒಂದೇ ಕೀಲಿಕೈ ಕೆಲಸ ಮಾಡಿದ್ದು ಹೇಗೆಂಬುದು ಯಕ್ಷಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News