ಅಮಿತ್ ಶಾ ಸಂಪುಟ ಸೇರಿದರೆ ಬಿಜೆಪಿ ಅಧ್ಯಕ್ಷ ಯಾರು?

Update: 2019-05-28 04:20 GMT

ಹೊಸದಿಲ್ಲಿ, ಮೇ 28: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಪಕ್ಷದ ಹುದ್ದೆಯಿಂದ ಮುಕ್ತಗೊಳಿಸಿ, ಮೋದಿ ಸಂಪುಟದಲ್ಲಿ ಸೇರಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ರಾಜಧಾನಿಯಲ್ಲಿ ಊಹಾಪೋಹಗಳು ಹುಟ್ಟಿಕೊಂಡಿದ್ದು, ಪಕ್ಷದ ವಲಯದಲ್ಲಿ ಕುತೂಹಲ ಮೂಡಿಸಿದೆ.

ಗಾಂಧಿ ನಗರ ಕ್ಷೇತ್ರದಿಂದ ಶಾ ಕಣಕ್ಕೆ ಇಳಿದಾಗಲೇ, ಮೋದಿ ಸಂಪುಟದಲ್ಲಿ ಪ್ರಮುಖ ಹೊಣೆಗಾರಿಕೆ ಇವರ ಹೆಗಲೇರಲಿದೆ ಎಂಬ ವದಂತಿಗಳಿಗೆ ರೆಕ್ಕೆ- ಪುಕ್ಕ ಹುಟ್ಟಿಕೊಂಡಿತ್ತು. ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕುತೂಹಲ ದುಪ್ಪಟ್ಟಾಗಿದೆ.

ಶಾ ಕೇಂದ್ರ ಸಂಪುಟ ಸೇರಿದರೆ, ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ಪಕ್ಷದ ಸಿದ್ಧಾಂತದ ಅನ್ವಯ ಅಧ್ಯಕ್ಷ ಹುದ್ದೆಗೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗುತ್ತದೆ. ಪಕ್ಷಾಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಹೆಸರುಗಳೆಂದರೆ ಕೇಂದ್ರ ಆರೋಗ್ಯ ಸಚಿವ ಜಗತ್ ಪಿ .ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್ ಅವರದ್ದು. ಆದರೆ ಶಾ ಅವರ ಪಾತ್ರವನ್ನು ತುಂಬುವುದು ಸುಲಭವಲ್ಲ ಎಂಬ ವಿಶ್ಲೇಷಣೆಗಳೂ ಪಕ್ಷದ ವಲಯದಲ್ಲಿ ನಡೆಯುತ್ತಿವೆ.

ಪ್ರಧಾನಿ ನರೇಂದ್ರ ಮೋದಿಯವರ ಆಪ್ತರಾಗಿರುವ ಶಾ, ಪಕ್ಷದ ಸಂಘಟನೆಯನ್ನು ಪರಿಣಾಮಕಾರಿ ಮತಯಂತ್ರವಾಗಿ ಬದಲಿಸುವ ಮೂಲಕ ಬಿಜೆಪಿಯ ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ. ಮೋದಿ ಸರ್ಕಾರದ ಎರಡನೇ ಇನಿಂಗ್ಸ್‌ನಲ್ಲಿ ಮೋದಿ ಆಕಾಂಕ್ಷೆಗಳ ಕಾರ್ಯಸೂಚಿಯ ತ್ವರಿತ ಅನುಷ್ಠಾನಕ್ಕಾಗಿ ಶಾ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News