ಧೂಮಚಡವು ಯುವಕನ ಕೊಲೆ ಪ್ರಕರಣ: ಆರೋಪಿಗಳ ಸೆರೆ
ಮಂಗಳೂರು, ಮೇ 29: ಧೂಮಚಡವು ಸಮೀಪದ ಮಿಜಾರ್ ಕುಂದೋಟ್ಟುವಿನ ಬರ್ಕೆ ನಿವಾಸಿ ನವೀನ್ ಭಂಡಾರಿ (29) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಉಡುಪಿ ಜಿಲ್ಲೆಯ ಪಲಿಮಾರು ಎಂಬಲ್ಲಿ ಬಂಧಿಸಿದೆ.
ಮಂಗಳೂರು ತಾಲೂಕಿನ ಧೂಮಚಡವು ನಿವಾಸಿಗಳಾದ ರಮೇಶ ಶೆಟ್ಟಿಗಾರ್ ಯಾನೆ ಪೊಂಗು, ಬಡಗ ಎಡಪದವು ನಿವಾಸಿ ನಿತ್ಯಾನಂದ ಯಾನೆ ಡುಬ್ಲಿ (41) ಬಂಧಿತ ಆರೋಪಿಗಳು.
ಆರೋಪಿಗಳ ಪತ್ತೆಗೆ ಎರಡು-ಮೂರು ತಂಡಗಳನ್ನು ರಚಿಸಲಾಗಿತ್ತು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿರುವ ಸಮಯ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ/ಸಿಬ್ಬಂದಿ ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ನವೀನ ಆರೋಪಿ ನಿತ್ಯಾನಂದನಿಂದ ಸಾಲವಾಗಿ ಪಡೆದುಕೊಂಡಿದ್ದ 20 ಸಾವಿರ ರೂ.ನ್ನು ವಾಪಸ್ ಕೂಡದೇ ಸತಾಯಿಸುತ್ತಿದ್ದನೆಂಬ ಕಾರಣವನ್ನಿಟ್ಟುಕೊಂಡು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ವಿವರ: ಮೇ 17ರಂದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಿಜಾರಿಗೆ ಹತ್ತಿರದ ಧೂಮಚಡವು ಎಂಬಲ್ಲಿ ಹೊಟೇಲೊಂದರ ಎದುರು ನವೀನ್ ಭಂಡಾರಿ ತಲೆಗೆ ಆರೋಪಿಗಳು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿದ್ದರು. ಈ ಬಗ್ಗೆ ಪ್ರಕರಣ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಕೆ. ಮಾರ್ಗದರ್ಶನದಂತೆ ಪಣಂಬೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳ ಮತ್ತು ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ ಪರಶಿವ ಮೂರ್ತಿ, ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಎಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಂ., ಇಸಾಕ್ ಮತ್ತು ಶರಣ್ ಕಾಳಿ ಹಾಗೂ ಬಜ್ಪೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.