×
Ad

ವೈಚಾರಿಕ ಜಾಗೃತಿಯಿಂದ ಮಹಿಳಾ ಸಬಲೀಕರಣ ಸಾಧ್ಯ: ಡಾ.ಮಹಾಬಲೇಶ್ವರ ರಾವ್

Update: 2019-05-29 20:48 IST

ಉಡುಪಿ, ಮೇ 29: ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ವೈಚಾರಿಕವಾಗಿ ಜಾಗೃತರಾಗದೆ ಈ ದೇಶದಲ್ಲಿ ಮಹಿಳಾ ಸಬಲೀಕರಣ ಸಾಧ್ಯವಿಲ್ಲ. ಸಬಲೀಕರಣ ಎಂಬುದು ಹೊರಗಿನ ವೇಷಭೂಷಣಗಳಲ್ಲಿಲ್ಲ. ಬದಲು ಅಂತರಂಗದ ಪರಿವರ್ತನೆ ಹಾಗೂ ಜಾಗೃತಿಯಲ್ಲಿದೆ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಡಾ.ಟಿ.ಎಂ.ಎ.ಪೈ ಹಾಗೂ ಟಿ.ಎ.ಪೈ ಅವರ ಸ್ಮತಿ ದಿನಾಚರಣೆಯಲ್ಲಿ ಮಹಿಳಾ ಸಬಲೀಕರಣದ ಸವಾಲುಗಳ ಕುರಿತು ಅವರು ವಿಚಾರ ಮಂಡಿಸಿ ಮಾತನಾಡುತಿದ್ದರು.

ಆಯ್ಕೆ ಹಾಗೂ ಅವಕಾಶಗಳಿಂದ ವಂಚಿತರಾಗಿರುವ ಕುರಿತು ಅರಿವು ಹಾಗೂ ಜಾಗೃತಿ ಮೂಡಿ, ಹಕ್ಕೋತ್ತಾಯಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವುದು ಹಾಗೂ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಪಡೆಯುವುದೇ ನಿಜವಾದ ಸ್ತ್ರೀ ಸಬಲೀಕರಣ ಎಂದರು.

ಗ್ರಾಮೀಣ ಪ್ರದೇಶ, ಹಿಂದುಳಿದ ವರ್ಗಗಳ ಮಹಿಳೆಯರಲ್ಲಿ ಇನ್ನೂ ಕೂಡ ಸ್ತ್ರೀ ಸಬಲೀಕರಣ ಆಗಿಲ್ಲ. ದೇಶದ ನಮ್ಮ ಸುಸಂಸ್ಕೃತ ಸಮಾಜದಲ್ಲಿ ಇಂದಿಗೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಸ್ತ್ರೀಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ವ್ಯಾಪಕವಾಗಿ ನಡೆಯುತ್ತಿದೆ. ಇವುಗಳ ಮಧ್ಯೆ ಭಾರತದಲ್ಲಿ ಸ್ತ್ರೀ ಸಬಲೀಕರಣ ಆಗಿದೆ ಎಂಬುದು ಹೇಳುವುದು ಬಹು ದೊಡ್ಡ ಭ್ರಮೆ ಹಾಗೂ ಹುಸಿ ನಂಬಿಕೆಯಾಗಿದೆ ಎಂದು ಅವರು ತಿಳಿಸಿದರು.

ಉದ್ಯೋಗ ಒದಗಿಸುವ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿ ಗಳಾಗಬೇಕಾಗಿದೆ. ಅದು ಅವರ ಸಬಲೀಕರಣಕ್ಕೆ ಹಾದಿಯಾಗುತ್ತದೆ. ಅದೇ ರೀತಿ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಪುರುಷರಿಗೆ ಸರಿಸಮಾನ ವಾಗಿ ಹೆಣ್ಣನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ನೀಡುವ ವ್ಯವಸ್ಥೆ ಬಂದರೆ ಸ್ತ್ರೀ ಸಬಲೀಕರಣ ಸಾಧ್ಯವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಮಹಿಳೆಯರು ಸೇರಿಸಿಕೊಂಡು ಆಧುನೀಕರಣ ಅಭಿವೃದ್ಧಿ ಸಾಕಾಗೊಂಡರೆ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ರಾಜಕೀಯವಾಗಿ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ದೊರೆತರೆ ಈ ದೇಶದಲ್ಲಿ ಸ್ತ್ರೀಯರ ಕುರಿತ ದೃಷ್ಛಿಕೋನ ಬದಲಾಗಲು ಸಾಧ್ಯವಾಗುತ್ತದೆ. ಇಂದಿನ ಮನೋರಂಜನಾ ಮಾಧ್ಯಮಗಳಲ್ಲಿ ಮಹಿಳೆಯರನ್ನು ವಿಲನ್‌ಗಳಾಗಿ ಚಿತ್ರಿಸಲಾಗುತ್ತಿದೆ. ಇದರ ವಿರುದ್ಧ ಯಾವುದೇ ಸಾಮಾಜಿಕ ಜಾಗೃತಿ ಹಾಗೂ ಗಂಭೀರ ಹೋರಾಟಗಳು ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಸಂಸ್ಮರಣಾ ಭಾಷಣ ಮಾಡಿ, ಸ್ಮತಿ ದಿನಾಚರಣೆ ಎಂಬುದು ಕಂದಾಚಾರದ ಆಚರಣೆಯಾಗದೆ, ಅವರ ಧ್ಯೇಯ, ಧೋರಣೆಯನ್ನು ನಿರ್ದಿಷ್ಟ ಗುರಿಯೊಂದಿಗೆ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಕೆಳ ಮಟ್ಟದ ಜನರ ಪರವಾಗಿ ಯಾವುದೇ ಬೇಧಬಾವ ಇಲ್ಲದೆ ಕೆಲಸ ಮಾಡಬೇಕು ಎಂದು ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ ತರಕಾರಿ ಬೀಜಗಳನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿ ಗಳಾಗಿ ಮಣಿಪಾಲ ಪವರ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಸೆಲ್ಕೋ ಫೌಂಡೇಶನ್ ಆಡಳಿತ ವ್ಯವಸ್ಥಾಕ ಜಗದೀಶ್ ಪೈ ಉಪಸ್ಥಿತರಿದ್ದರು.

ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ್ ಕಟ್ಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ವಂದಿಸಿದರು. ಪಿ.ವೈಕುಂಠ ಹೇರ್ಳೆ ಕಾರ್ಯಕ್ರಮ ನಿರೂಪಿಸಿ ದರು. ಈ ಸಂದರ್ಭದಲ್ಲಿ ಟ್ರಸ್ಟಿನಲ್ಲಿ ತರಬೇತಿ ಪಡೆದ ಮಹಿಳೆಯರಿಂದ ತಯಾ ರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಶಿಕ್ಷಣದಲ್ಲಿ ಲಿಂಗತ್ವ ಪೂರ್ವಾಗ್ರಹ

ನಮ್ಮ ಶಿಕ್ಷಣ ವ್ಯವಸ್ಥೆಯು ಪರಂಪರಾಗತವಾದ, ಸಾಂಪ್ರದಾಯಿಕವಾದ ವೌಲ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದೆಯೇ ಹೊರತು ಸ್ತ್ರೀ ಅಸ್ಮಿತೆಯನ್ನು ಜಾಗೃತಿಗೊಳಿಸುವ ರೀತಿಯಲ್ಲಿ ಇಲ್ಲ. ಶಾಲಾ ಪಠ್ಯ ಪುಸ್ತಕಗಳಲ್ಲೂ ಲಿಂಗತ್ವ ಪೂರ್ವಾಗ್ರಹ ಹಾಗೂ ಪುರುಷ ಪ್ರಾಧಾನ್ಯತೆ ಕಂಡುಬರುತ್ತದೆ. ಪ್ರಶ್ನಿಸುವ ಮನೋಭಾವ, ಹೋರಾಟದ ಕಿಡಿ, ವೈಚಾರಿಕ ಸಾಹಸಿ ಪ್ರವೃತಿ ಮಹಿಳೆಯರಲ್ಲಿ ಮೂಡುವ ಶಿಕ್ಷಣ ದೊರೆತರೆ ಬದಲಾವಣೆ ಸಾಧ್ಯವಾಗುತ್ತದೆ ಎಂದು ಡಾ. ಮಹಾಬಲೇಶ್ವರ ರಾವ್ ತಿಳಿಸಿದರು.

ನಮ್ಮ ದೇಶದಲ್ಲಿ ದ್ರೌಪದಿ, ಸಾವಿತ್ರಿ, ಅಂಬೆಯನ್ನು ಸ್ತ್ರೀ ಸಬಲೀಕರಣಕ್ಕೆ ಬಹಳ ದೊಡ್ಡ ನಿದರ್ಶನವಾಗಿ ಬಿಂಬಿಸಲಾಗುತ್ತದೆ. ಆದರೆ ಇವರೆಲ್ಲ ತಮ್ಮ ವೈಯಕ್ತಿಕ ಬದುಕಿಗಾಗಿ ಹೋರಾಟ ನಡೆಸಿದ್ದಾರೆಯೇ ಹೊರತು ಸ್ತ್ರೀ ಸಮುದಾಯದ ಏಳಿಗೆಗಾಗಿ ಹಾಗೂ ಹಕ್ಕಿಗಳಿಗಾಗಿ ಸಂಘಟತಾತ್ಮಕ ಹೋರಾಟ ಮಾಡಿದವರಲ್ಲ. ಆದುದರಿಂದ ಇವರನ್ನು ಸ್ತ್ರೀ ಸಬಲೀಕರಣ ಹಾಗೂ ಹೋರಾಟ ಪ್ರತೀಕ ಎಂಬುದಾಗಿ ಒಪ್ಪಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News