×
Ad

ಉಡುಪಿ: ಜೂ.1ರಂದು ಯಕ್ಷನಿಧಿ ಕಲಾವಿದರ ಸಮಾವೇಶ

Update: 2019-05-29 20:51 IST

 ಉಡುಪಿ, ಮೇ 29: ಯಕ್ಷಗಾನ ಕಲಾರಂಗ ಉಡುಪಿ ಇದರ ಅಂಗಸಂಸ್ಥೆ ‘ಯಕ್ಷನಿಧಿ’ಯ 21ನೇ ಸಮಾವೇಶ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಜೂನ್ 1ರಂದು ಸಂಪನ್ನಗೊಳ್ಳಲಿದೆ. ಪರ್ಯಾಯ ಪಲಿಮಾರು ಮಠಾಧೀಶರು ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಚಾವಣಿಗೆ ಚಿನ್ನದ ಗೋಪುರ ಸಮರ್ಪಣೆಯ ಕಾರ್ಯಕ್ರಮ 10 ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ಯಕ್ಷನಿಧಿ ಕಾರ್ಯಕ್ರಮವು ‘ಯಕ್ಷಗೋಪುರ’ ಶೀರ್ಷಿಕೆಯಲ್ಲಿ ಜರಗಲಿದೆ.

ಜೂ.1ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಸಮಾವೇಶ ನಡೆಯ ಲಿದ್ದು, ಇದರ ಪ್ರಧಾನ ಸಮಾರಂಭ ಅಪರಾಹ್ನ 3 ಕ್ಕೆ ನಡೆಯಲಿದೆ. ಪರ್ಯಾಯ ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ. ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರೊ.ಎಂ.ಎ.ಹೆಗಡೆ ಶುಭಾಶಂಸನೆ ಮಾಡಲಿದ್ದಾರೆ. ಡಾ.ಮೋಹನ್ ಆಳ್ವ, ಡಾ. ಪ್ರಬಾಕರ ಶಿಶಿಲ, ಆನಂದ ಸಿ. ಕುಂದರ್, ಭುವನೇಂದ್ರ ಕಿದಿಯೂರು, ಪಿ. ಪುರುಷೋತ್ತಮ ಶೆಟ್ಟಿ, ಹರಿಯಪ್ಪ ಕೋಟ್ಯಾನ್ ಹಾಗೂ ಯಶ್‌ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಈ ವರ್ಷ ಅಗಲಿದ 11 ಕಲಾವಿದರ ಕುಟುಂಬಕ್ಕೆ ತಲಾ 25,000 ರೂ.ಗಳ ಸಾಂತ್ವನ ನಿಧಿಯನ್ನು ಸಮರ್ಪಿಸಲಾಗುವುದು. ಪೂರ್ವಾಹ್ನ 9:00ರಿಂದ 11:30ರವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಯಲಿದೆ. ಇದರಲ್ಲಿ ಖ್ಯಾತ ವೈದ್ಯರು ಭಾಗವಹಿಸಲಿದ್ದಾರೆ. ಬಳಿಕ 11:30 ರಿಂದ ಪ್ರೊ.ಎಂ.ಎಲ್.ಸಾಮಗರ ನಿರೂಪಣೆಯಲ್ಲಿ ‘ಯಕ್ಷಗಾನವೂ- ಶಬ್ದಮಾಲಿನ್ಯವೂ’ ಎಂಬ ವಿಷಯದ ಕುರಿತು ಸಂವಾದ ಹಾಗೂ ಕಲಾಪ್ರಸ್ತುತಿ ಜರಗಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News