ಉಡುಪಿ ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ‘ಪ್ರಾರಂಭೋತ್ಸವ’, ‘ಸಿಹಿಯೂಟ’
ಉಡುಪಿ, ಮೇ 29: 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆರಂಭದೊಂದಿಗೆ ಅಧಿಕೃತ ಚಾಲನೆ ದೊರೆಯಿತು. ಒಂದನೇ ತರಗತಿಗಳಿಗೆ ಸೇರ್ಪಡೆಗೊಂಡ ಪುಟಾಣಿಗಳಿಗೆ ಭವ್ಯ ಸ್ವಾಗತದೊಂದಿಗೆ ಇಂದು ಹೆಚ್ಚಿನೆಲ್ಲಾ ಶಾಲೆ ಗಳಲ್ಲೂ ಸಿಹಿಯೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ವ್ಯವಸ್ಥೆಗೊಳಿಸಲಾಗಿತ್ತು.
ಜಿಲ್ಲೆಯಾದ್ಯಂತ ತೀವ್ರವಾಗಿ ಬಾಧಿಸುತ್ತಿರುವ ನೀರಿನ ಸಮಸ್ಯೆ ಮಧ್ಯೆ, ಇಂದು ನೀರಿನ ವಿಶೇಷ ವ್ಯವಸ್ಥೆಯೊಂದಿಗೆ ಎಲ್ಲಾ ಶಾಲೆಗಳ ಪ್ರಾರಂಭಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕೆಲವು ಶಾಲೆಗಳು ಇಂದು ‘ಸಿಹಿ’ಯನ್ನು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಳೆ ಬಿಸಿಯೂಟದೊಂದಿಗೆ ನೀಡಲು ನಿರ್ಧರಿಸಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ದಿನವಾದ ಇಂದು ಹೆಚ್ಚಿನೆಲ್ಲಾ ಶಾಲೆಗಳು ಪ್ರಾರಂಭಗೊಂಡಿವೆ. ಈ ಸಂದರ್ಭದಲ್ಲಿ ವಿಶೇಷ ಸಮಾರಂಭವನ್ನು ಏರ್ಪಡಿಸಿರುವ, ಸಿಹಿಯೂಟ ಬಡಿಸಿರುವ ವರದಿಗಳು ಬಂದಿವೆ. ಆದರೆ ಉಡುಪಿಯ ಬೋರ್ಡ್ ಶಾಲೆಯೂ ಸೇರಿದಂತೆ ಜಿಲ್ಲೆಯ ಶೇ.25ರಷ್ಟು ಶಾಲೆಗಳು ನೀರಿನ ಸಮಸ್ಯೆಯ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಪರಿಶೀಲಿಸಿ, ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ. ಕೆಲವು ಶಾಲೆಗಳಿಗೆ ಮಧ್ಯಾಹ್ನದವರೆಗೆ ತರಗತಿಗಳನ್ನು ನಡೆಸಲು ಸೂಚಿಸಬಹುದು ಎಂದವರು ನುಡಿದರು.
ದಿನಕರಬಾಬು ಭೇಟಿ: ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಅವರು ಇಂದು ಜಿಲ್ಲೆಯ ಆಯ್ದ ಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ವ್ಯವಸ್ಥೆಯ ಕುರಿತು ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಚರ್ಚಿಸಿದರು. ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳಿಗೆ ಅವರು ಶುಭಾಶಯಗಳನ್ನು ಸಲ್ಲಿಸಿದರು.
ಶಾಲೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ, ಮಕ್ಕಳಿಗೆ ಕುಡಿಯುವ ನೀರಿನ ಅಗತ್ಯತೆ ಹಾಗೂ ಇತರ ಅವಶ್ಯಕತೆಗಳಿಗೆ ಬೇಕಾಗುವಷ್ಟು ನೀರಿನ ವ್ಯವಸ್ಥೆ ಮಾಡುವಂತೆ ಅವರು ಡಿಡಿಪಿಐ ಅವರಿಗೆ ಸೂಚನೆಗಳನ್ನು ನೀಡಿದರು.
ಕುಂದಾಪುರದಲ್ಲಿ ನೀರಿನ ಸಮಸ್ಯೆ: ಕುಂದಾಪುರ ತಾಲೂಕಿನ ಸುಮಾರು 20ರಷ್ಟು ಶಾಲೆಗಳು ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಿವೆ. ಇಂದು ತಾಲೂಕಿನ 4-5 ಶಾಲೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಶಾಲೆಗಳು ತೆರೆದಿದ್ದು, ಶಾಲಾ ಪ್ರಾರಂಭೋತ್ಸವ ಹಾಗೂ ಸಿಹಿಯೊಂದಿಗೆ ಬಿಸಿಯೂಟವನ್ನು ಮಕ್ಕಳಿಗೆ ಬಡಿಸಿವೆ ಎಂದು ಕುಂದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್ ತಿಳಿಸಿದ್ದಾರೆ.
ಇಂದು ಗ್ರಾಪಂನ ನೆರವಿನಿಂದ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಶಾಲೆ ನಡೆಯುವಂತೆ ನೋಡಿಕೊಳ್ಳಲಾಗಿದೆ. ಶೇ.90ರಷ್ಟು ಶಾಲೆಗಳು ಸಿಹಿಯೂಟವನ್ನು ನೀಡಿವೆ. ಉಳಿದ ಶಾಲೆಗಳು ನಾಳೆ ಸಿಹಿಯೂಟ ನೀಡುವುದಾಗಿ ತಿಳಿಸಿವೆ ಎಂದು ಅವರು ವಿವರಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ, ಜಿಎಚ್‌ಪಿಎಸ್ ಕಂಡ್ಲೂರು, ಜಿಎಚ್‌ಪಿಎಸ್ ಕೋಮೆ, ಜಿಎಚ್‌ಪಿಎಸ್ ಕೊರವಡಿ, ಗೋಪಾಡಿ ಪಡು ಶಾಲೆಗಳು ನೀರಿನ ತೀವ್ರ ಸಮಸ್ಯೆ ಎದುರಿಸುತಿದ್ದು, ಅವುಗಳಿಗೆ ಮಧ್ಯಾಹ್ನದವರೆಗೆ ತರಗತಿ ನಡೆಸುವಂತೆ ಸೂಚಿಸಲಾಗಿದೆ.
ತಾಲೂಕಿನ ಎಲ್ಲಾ ಅನುದಾನಿತ ಶಾಲೆಗಳು ಇಂದು ಪ್ರಾರಂಭಗೊಂಡಿವೆ. ಅನುದಾನ ರಹಿತ ಶಾಲೆಗಳಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಹಾಗೂ ಅಮಾಸೆಬೈಲಿನ ಜ್ಯುವೆಲ್‌ಸ್ಟಾರ್ ಶಾಲೆಗಳು ವಿವಿಧ ಕಾರಣಗಳಿಗಾಗಿ ಜೂ.10ರಿಂದ ಶಾಲೆ ಪ್ರಾರಂಭಿಸುವ ಇರಾದೆಯನ್ನು ವ್ಯಕ್ತಪಡಿಸಿವೆ. ಮದರ್ ತೆರೆಸಾ ಹೈಸ್ಕೂಲ್‌ನಲ್ಲಿ 10ನೇ ತರಗತಿಯ ಕ್ಲಾಸ್‌ಗಳು ನಡೆಯುತಿದ್ದರೆ, ಎಂಟು ಮತ್ತು 9ನೇ ತರಗತಿ ಮಕ್ಕಳ ತರಗತಿಗಳನ್ನು ಜೂ.10ಕ್ಕೆ ಪ್ರಾರಂಭಿಸುವುದಾಗಿ ತಿಳಿಸಿವೆ ಎಂದರು.
ಸಿದ್ಧಾಪುರದಲ್ಲಿ ಜಾಥಾ: ಸಿದ್ಧಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಇಂದು ನಗರದ ಬೀದಿಗಳಲ್ಲಿ ‘ದಾಖಲಾತಿ ಅರಿವು’ ಜಾಥಾ ನಡೆಸಿದರು. ಬಳಿಕ ಶಾಲೆಯಲ್ಲಿ ಸಭಾ ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪುಟಾಣಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಬೇಳೂರು ಶಾಲೆಗೆ ಬಸ್ ಕೊಡುಗೆ: ತೆಕ್ಕಟ್ಟೆ ಸಮೀಪದ ಬೇಳೂರು ಗ್ರಾಪಂ ವ್ಯಾಪ್ತಿಯ ನಾಲ್ಕು ಶಾಲೆಗಳ ಮಕ್ಕಳಿಗಾಗಿ ಇಲ್ಲಿನ ಶಂಕರನಾರಾಯಣ ಟ್ರಸ್ಟ್ ಬಸ್ ಒಂದನ್ನು ನೀಡಿದ್ದು, ಒಂದು ವರ್ಷದ ಮಟ್ಟಿಗೆ ಈ ಬಸ್‌ನ ನಿರ್ವಹಣೆಯನ್ನು ಗ್ರಾಪಂ ನೋಡಿಕೊಳ್ಳಲಿದೆ ಎಂದು ಅಶೋಕ ಕಾಮತ್ ತಿಳಿಸಿದರು.
ತೆಕ್ಕಟ್ಟೆ ಸಮೀಪದ ಬೇಳೂರು ಗ್ರಾಪಂ ವ್ಯಾಪ್ತಿಯ ನಾಲ್ಕು ಶಾಲೆಗಳ ಮಕ್ಕಳಿಗಾಗಿ ಇಲ್ಲಿನ ಶಂಕರನಾರಾಯಣ ಟ್ರಸ್ಟ್ ಬಸ್ ಒಂದನ್ನು ನೀಡಿದ್ದು, ಒಂದು ವರ್ಷದ ಮಟ್ಟಿಗೆ ಈ ಬಸ್‌ನ ನಿರ್ವಹಣೆಯನ್ನು ಗ್ರಾಪಂ ನೋಡಿಕೊಳ್ಳಲಿದೆ ಎಂದು ಅಶೋಕ ಕಾಮತ್ ತಿಳಿಸಿದರು. ಬೇಳೂರು ಆಸುಪಾಸಿನ ನಾಲ್ಕು ಶಾಲೆಗಳ ಮಕ್ಕಳನ್ನು ಬೆಳಗ್ಗೆ ಶಾಲೆಗೆ ಕರೆದುಕೊಂಡು ಬರಲು ಹಾಗೂ ಸಂಜೆ ವಾಪಾಸು ಮನೆಗೆ ಕರೆದೊಯ್ಯಲು ಈ ಬಸ್‌ನ್ನು ಉಪಯೋಗಿಸಲಾಗುವುದು. ಶಾಲೆಗೆ ಆಸುಪಾಸಿನ ಗ್ರಾಮಗಳ ಮಕ್ಕಳನ್ನು ಆಕರ್ಷಿಸುವಲ್ಲಿ ಇದು ಸಹಕಾರಿಯಾಗಬಹುದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.