×
Ad

ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವ

Update: 2019-05-29 21:01 IST

ಬಂಟ್ವಾಳ, ಮೇ 29: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. 

ಜಿಪಂ ಸದಸ್ಯ ಬಿ. ಪದ್ಮಶೇಖರ ಜೈನ್ ಅವರು ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ, ಮೆರವಣಿಗೆ ಯನ್ನು ಉದ್ಘಾಟಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಫಲ ಪುಷ್ಪ-ಹಾರಾರ್ಪಣೆ, ಆರತಿ ಬೆಳಗಿಸುವಿಕೆ, ಸಿಹಿ ತಿಂಡಿ ವಿತರಣೆ ಕಾರ್ಯಕ್ರಮಗಳೊಂದಿಗೆ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವ ಸಂಪನ್ನಗೊಂಡಿತು.

ವಾದ್ಯ-ಬ್ಯಾಂಡ್‍ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ನೂತನವಾಗಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಇದೇ ವೇಳೆ ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು ಸಿಂಪಡಿಸಿ, ಹೂ ಹಾಕಿ ಸ್ವಾಗತಿಸಿದರು. ಬಳಿಕ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಮಕ್ಕಳ ಹೆತ್ತವರು ಮಕ್ಕಳಿಂದ ಅಕ್ಕಿಯಲ್ಲಿ ಅಕ್ಷರ ಬರೆಸುವ ಮೂಲಕ ಅಕ್ಷರಾಭ್ಯಾಸಕ್ಕೆ ಆರಂಭ ನೀಡಲಾಯಿತು.

ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹಸಿರು ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹಸಿರು ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು. ಇದೇ ವೇಳೆ ಬಿ.ಪದ್ಮಶೇಖರ ಜೈನ್ ಹೊರೆ ಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಉಚಿತ ಲೇಖನ ಪುಸ್ತಕಗಳನ್ನು ವಿತರಿಸಿದರು. 

ಗ್ರಾಪಂ ಅಧ್ಯಕ್ಷ ಸಂತೋಷ್ ಪೂಂಜ, ಮಾಜಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ಗ್ರಾಪಂ ಸದಸ್ಯರಾದ ಸತೀಶ್ ಪಡಂತ್ರಬೆಟ್ಟು , ಮೋಹನ ಆಚಾರ್ಯ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ದಿವಾಕರ ದಾಸ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ರಾಜಗೋಪಾಲ, ಯೋಗೀಶ ಆಚಾರ್ಯ, ವಿಶಾಲಾಕ್ಷಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಪೂಜಾರಿ, ಪ್ರಮುಖರಾದ ಪ್ರವೀಣ್ ನಡಿಮಾರ್, ದಾಮೋದರ ಗುರಿಮಜಲು,  ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಉಮಾ ಡಿ. ಗೌಡ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಪ್ರಸ್ತಾವಿಸಿದರು. ಶಿಕ್ಷಕ ಚಂದಪ್ಪ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News