×
Ad

"ತಾಯಿ ಮಡಿಲಿನಿಂದ ಮಗು ಶಾಲಾ ತರಗತಿಗೆ": ದಡ್ಡಲಕಾಡು ಶಾಲಾ ಆರಂಭೋತ್ಸವ

Update: 2019-05-29 21:06 IST

ಬಂಟ್ವಾಳ, ಮೇ 29: "ತಾಯಿ ಮಡಿಲಿನಿಂದ ಮಗು ಶಾಲಾ ತರಗತಿಗೆ" ಪರಿಕಲ್ಪನೆಯಡಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ಬುಧವಾರ ದಡ್ಡಲಕಾಡು ಸರಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಒಂದನೇ ತರಗತಿಗೆ ಸೇರಿದ 125 ವಿದ್ಯಾರ್ಥಿಗಳು ಸಹಿತ ಪ್ರಾಥಮಿಕ ಪೂರ್ವ ಹಾಗೂ ಇತರ ತರಗತಿಗಳಿಗೆ ಸೇರಿದ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿಕೊಳ್ಳಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶಿವಪ್ರಕಾಶ್ ಹೊಸ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ನೀಡಿ ಶಾಲೆಗೆ ಬರ ಮಾಡಿಕೊಂಡರು. ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪುಸ್ತಕ ಪಡೆಯಲು ಮಕ್ಕಳು ಬೀದಿಯಲ್ಲಿ ನಿಂತು ಹೋರಾಟ ಮಾಡಿದ ಕಾಲವೊಂದಿತ್ತು. ಆದರೆ ಇಂದು ಆಂಗ್ಲ ಮಾಧ್ಯಮ ಕಲಿಕೆ  ಸರಕಾರವೇ ಅವಕಾಶ ನೀಡಿದ್ದು, ದಡ್ಡಲಕಾಡು ಶಾಲೆಗೂ ಅನುಮತಿ ಸಿಕ್ಕಿರುವುದು ಸಂತೋಷ ನೀಡಿದೆ ಎಂದ ಅವರು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆ ಮಂಜೂರು ಗೊಳಿಸುವ ಭರವಸೆ  ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಮಾತನಾಡಿ, ನಿರಂತರ ಹೋರಾಟ ಹಾಗೂ ಶ್ರಮದ ಫಲವಾಗಿ ಈ ಶಾಲೆ ಎತ್ತರಕ್ಕೆ ಬೆಳೆದು ನಿಂತಿದೆ. 30 ಮಕ್ಕಳಿದ್ದ ಶಾಲೆಯಲ್ಲಿ ಮೂರು ವರ್ಷದ ಅವಧಿಯಲ್ಲಿ 700 ಮಕ್ಕಳಿಗೆ ಏರಿಕೆಯಾಗಬೇಕಾದರೆ ಅದರ ಹಿಂದಿರುವ ಪರಿಶ್ರಮವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಶಾಲಾ ದತ್ತು ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪಂಜಿಕಲ್ಲು ಗ್ರಾಪಂ ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ ಸ್ವಾಗತಿಸಿದರು, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳ ಪಾಲಕರಿಗೆ ಪೂರಕ ಮಾಹಿತಿ ನೀಡಿದರು. ಪುರುಷೋತ್ತಮ ಅಂಚನ್, ನವೀನ್ ಸೇಸಗುರಿ, ಬಾಲಕೃಷ್ಣ ಜಿ., ಅಶ್ವತ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಅವರು ಶಾಲಾ ಹೊಸ ಬಸ್ಸಿಗೆ ಚಾಲನೆ ನೀಡಿ, ಕೀಲಿ ಕೈಯನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರ ಜಿಲ್ಲಾ ಪಂಚಾಯತ್ ಅನುದಾನದಡಿ ಮಂಜೂರುಗೊಂಡ ಪೀಠೋಪಕರಣ ಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಬಂಟ್ವಾಳದ ಅಂಬಿಕಾ ಮೆಟಲ್‍ನವರು ಉಚಿತವಾಗಿ ಕೊಡಮಾಡಿದ ಸ್ಟೀಲ್ ಬಟ್ಟಲನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. 

ಶಾಲೆ ಶೃಂಗಾರ

ಆರಂಭೋತ್ಸವದ ಹಿನ್ನಲೆಯಲ್ಲಿ ಶಾಲೆಯನ್ನು ತಳಿರು ತೋರಣ ಹಾಗೂ ಬಂಟಿಂಗ್ಸ್‍ಗಳಿಂದ  ಸಿಂಗರಿಸಲಾಗಿತ್ತು. ಹೊಸ ವಿದ್ಯಾರ್ಥಿಗಳನ್ನು ಶಾಲಾ ಅಂಗಣದಿಂದ ವಾದ್ಯ ಹಾಗೂ ಬ್ಯಾಂಡ್‍ಗಳ ಮೂಲಕ ಮರೆವಣಿಗೆಯಲ್ಲಿ ಕರೆ ತರಲಾಯಿತು. ಈ ವರ್ಷ ಒಂದನೇ ತರಗತಿಗೆ 125 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. ಎಲ್‍ಕೆಜಿ, ಯೂಕೆಜಿ ಸೇರಿ ಒಟ್ಟು 270 ಮಂದಿ ಹೊಸ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದು, ವಿದ್ಯಾರ್ಥಿಳ ಒಟ್ಟು ಸಂಖ್ಯೆ ಏಳ್ನೂರು ಗಡಿ ದಾಟಿದೆ. ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿರುವುದರಿಂದ ಒಂದನೇ ತರಗತಿಗೆ  ಎ,ಬಿ,ಸಿ ಮೂರು ವಿಭಾಗಗಳನ್ನು ತೆರೆಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News