ಹೂಳೆತ್ತಲು ಬಾವಿಗೆ ಇಳಿದ ವ್ಯಕ್ತಿ ಮೃತ್ಯು
Update: 2019-05-29 21:45 IST
ಬ್ರಹ್ಮಾವರ, ಮೇ 29: ಹೊಸೂರು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿರುವ ಸರಕಾರಿ ಬಾವಿಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದ ಕಾರ್ಮಿಕ ರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮೇ 29ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ರವಿ ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಜಯರಾಮ ಶೆಟ್ಟಿ ಎಂಬವರು ಯಾವುದೇ ಸುರಕ್ಷತಾ ಕ್ರಮಕೈಗೊಳ್ಳದೆ ಹಾಗೂ ಗ್ರಾಪಂನಿಂದ ಅನುಮತಿ ಪಡೆಯದೆ ನಿರ್ಲಕ್ಷತನದಿಂದ ಹಳೆಯ ಬಾವಿಗೆ ರವಿಯನ್ನು ಕಸ-ಕಡ್ಡಿ ತೆಗೆಯಲು ಇಳಿಸಿದ್ದು, ಬಾವಿಯಲ್ಲಿ ಆಮ್ಲಜನಕದ ತೊಂದರೆಯಿಂದ ಉಸಿರು ಗಟ್ಟಿ ರವಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಮೇಲಕ್ಕೆತ್ತಿದರು. ಕರ್ಜೆ ಗ್ರಾಪಂ ಪಿಡಿಓ ಪ್ರಮಿತಾ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.