ಸ್ನಾತಕೋತರ ವೈದ್ಯಕೀಯ ದಾಖಲಾತಿ ಗಡುವು ವಿಸ್ತರಣೆ

Update: 2019-05-29 16:19 GMT

ಹೊಸದಿಲ್ಲಿ, ಮೇ.29: ಸ್ನಾತಕೋತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳ ದಾಖಲಾತಿ ದಿನಾಂಕವನ್ನು ಕೇಂದ್ರ ಸರಕಾರ ಮೇ 31ರವರೆಗೆ ವಿಸ್ತರಿಸಿದೆ. 2019-20ರ ಶೈಕ್ಷಣಿಕ ವರ್ಷದಲ್ಲಿ ಖಾಲಿ ಇರುವ ಸೀಟುಗಳನ್ನು ತುಂಬುವ ಉದ್ದೇಶದಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ದಾಖಲಾತಿ ಪಡೆದಿರುವ ಅಭ್ಯರ್ಥಿಗಳು ತಮಗೆ ನಿಗದಿಯಾದ ಕೋರ್ಸ್‌ಗಳನ್ನು ಮತ್ತು ಕಾಲೇಜನ್ನು ತೊರೆದು ಖಾಲಿ ಇರುವ ಸೀಟ್‌ಗಳಿಗೆ ದಾಖಲಾತಿ ಪಡೆಯಲು ಅವಕಾಶವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಸಾರ್ವಜನಿಕ ನೋಟಿಸ್‌ನಲ್ಲಿ ತಿಳಿಸಿದೆ. ರಾಜ್ಯಗಳ ಸ್ನಾತಕೋತರ ವೈದ್ಯಕೀಯ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಆರೋಗ್ಯ ಸಚಿವಾಲಯ ಮಂಗಳವಾರ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಗೆ ಮನವಿ ಮಾಡಿದ ಹಿನ್ನೆಲಯಲ್ಲಿ ಮಂಡಳಿ ಈ ಬಗ್ಗೆ ಪರಿಶೀಲನೆ ನಡೆಸಿತ್ತು.

ಎಂಸಿಐ ಈ ಹಿಂದೆ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸ್ನಾತಕೋತರ ವೈದ್ಯಕೀಯ ಸೀಟ್‌ಗಳನ್ನು ತುಂಬಲು ಕೊನೆಯ ದಿನಾಂಕ ಮೇ 18 ಆಗಿತ್ತು. ಇತ್ತೀಚೆಗೆ ಆಡಳಿತಗಾರರ ಮಂಡಳಿಯ ಜೊತೆಗೆ ಸಮಾಲೋಚನೆ ನಡೆಸಿದ ಸಚಿವಾಲಯ 2019-20ರ ನೀಟ್-ಪಿಜಿಗೆ ಅರ್ಹತೆ ಪಡೆಯುವ ಅಂಕಗಳಲ್ಲಿ ಸೇ.6 ಇಳಿಕೆ ಮಾಡಿತ್ತು. ಎರಡನೇ ಸುತ್ತಿನ ಸಮಾಲೋಚನೆ ಮುಗಿದ ನಂತರವೂ ಖಾಲಿ ಉಳಿದ ಸುಮಾರು 2,000 ಸೀಟ್‌ಗನ್ನು ತುಂಬುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News