ಜಿಎಸ್‌ಟಿ ಅಧಿಕಾರಿಗಳ ಅಧಿಕಾರದ ಬಗ್ಗೆ ಪರಿಶೀಲಿಸಲು ಸುಪ್ರೀಂ ಒಪ್ಪಿಗೆ

Update: 2019-05-29 16:24 GMT

ಹೊಸದಿಲ್ಲಿ, ಮೇ.29: ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿ ಮಾಡದಿರುವ ವ್ಯಕ್ತಿಗಳನ್ನು ಬಂಧಿಸುವ ಜಿಎಸ್‌ಟಿ ಅಧಿಕಾರಿಗಳ ಅಧಿಕಾರದ ಬಗ್ಗೆ ಪರಿಶೀಲನೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಬುಧವಾರ ಒಪ್ಪಿಗೆ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಬಗ್ಗೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರಿಂ ಕೋರ್ಟ್ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಸುವಂತೆ ತಿಳಿಸಿದೆ. ಈ ಮನವಿಯ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸಬೇಕೆಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ಅನಿರುದ್ಧ ಬೋಸ್ ಅವರ ರಜಾಕಾಲದ ಪೀಠ ತಿಳಿಸಿದೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಡಿ ಅಧಿಕಾರಿಗಳಿಗೆ ನೀಡಲಾಗಿರುವ, ಆರೋಪಿ ವ್ಯಕ್ತಿಯನ್ನು ಎಫ್‌ಐಆರ್ ದಾಖಲಿಸದೆಯೇ ಬಂಧಿಸುವ ಅಧಿಕಾರದ ಬಗ್ಗೆ ಸ್ಪಷ್ಟೀಕರಣ ಕೋರಿ ಕೇಂದ್ರ ಶ್ರೇಷ್ಠ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು. ಈ ಮನವಿಯಲ್ಲಿ, ಸೂಕ್ತ ಪ್ರಕ್ರಿಯೆಯನ್ನು ಅನುಸರಿಸದೆ ಆರೋಪಿಯನ್ನು ಬಂಧಿಸುವಂತಿಲ್ಲ ಎಂಬ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಕೇಂದ್ರ ಸರಕಾರ ಪ್ರಶ್ನಿಸಿತ್ತು. ತೆರಿಗೆ ಅಧಿಕಾರಿಗಳ ಅಧಿಕಾರದ ಬಗ್ಗೆ ವಿವಿಧ ಉಚ್ಚ ನ್ಯಾಯಾಲಯಗಳು ಭಿನ್ನ ಅಭಿಪ್ರಾಯ ಹೊಂದಿವೆ ಎಂಬುದನ್ನು ಕೇಂದ್ರ ಬೆಟ್ಟು ಮಾಡಿತ್ತು. ತೆಲಂಗಾಣ ಉಚ್ಚ ನ್ಯಾಯಾಲಯ ಜಿಎಸ್‌ಟಿ ಅಧಿಕಾರಿಗಳ ಅಧಿಕಾರವನ್ನು ಎತ್ತಿಹಿಡಿದಿದೆ ಎಂದು ಕೇಂದ್ರ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News