ಇಫ್ತಾರ್ ಕೂಟ: ಸೌಹಾರ್ದದಿಂದ ಬದುಕಬೇಕು- ಐವನ್ ಡಿಸೋಜ
ಮಂಗಳೂರು, ಮೇ 29: ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ 4ನೇ ವರ್ಷದ ಸೌಹಾರ್ದ ಸಭೆ ಹಾಗೂ ಇಫ್ತಾರ್ ಕೂಟವನ್ನು ನಗರದ ಫಾದರ್‌ಮುಲ್ಲರ್ ಕನ್ವೇನ್‌ಶನ್ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಸೌಹಾರ್ದ ಸಭೆಯಲ್ಲಿ ಮಾತನಾಡಿದ ಐವನ್ ಡಿಸೋಜ, ಕಳೆದ ಹಲವು ವರ್ಷಗಳಿಂದ ರಮಝಾನ್, ದೀಪಾವಳಿ, ಕ್ರಿಸ್‌ಮಸ್ ಸೌಹಾರ್ದ ಸಭೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ಮಂಗಳೂರಿನ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮಾಜದಲ್ಲಿ ಎಲ್ಲರೂ ಸೌಹಾರ್ದದಿಂದ ಬದುಕಬೇಕು ಎಂದು ಹೇಳಿದರು.
ನಾವು ಎಲ್ಲರ ಹಬ್ಬಗಳನ್ನೂ ಆಚರಿಸುತ್ತೇವೆ. ಮಂಗಳೂರಿನಲ್ಲಿ ಎಲ್ಲ ಧರ್ಮಗಳ ಜನತೆಯೂ ಒಗ್ಗಟ್ಟಾಗಿದ್ದಾರೆ ಎನ್ನುವುದು ಇಂತಹ ಸೌಹಾರ್ದ ಸಭೆಗಳ ಉದ್ದೇಶವಾಗಿದೆ. ಸೌಹಾರ್ದದಿಂದ ಬಾಳುವುದರಿಂದ ಉತ್ಕೃಷ್ಠ ಬದುಕನ್ನು ನಡೆಸಬಹುದು. ಸರ್ವಧರ್ಮಗಳಲ್ಲೂ ಸಹಿಷ್ಣುತೆ ಇರಬೇಕು ಎಂದು ಹೇಳಿದರು.
ನಮ್ಮ ಧರ್ಮವನ್ನು ಪಾಲಿಸಬೇಕು. ಜತೆಗೆ ಪ್ರತಿಯೊಬ್ಬರು ಉಳಿದ ಧರ್ಮಗಳನ್ನು ಗೌರವಿಸಬೇಕು. ಸೌಹಾರ್ದದಿಂದ ನೂರಕಾಲ ಬದುಕಬೇಕು. ಧರ್ಮ ಸಹಿಷ್ಣುತೆ ಎನ್ನುವುದು ತುಂಬ ಶ್ರೇಷ್ಠವಾದ ಪದ. ಎಲ್ಲ ಧರ್ಮಗಳ ಜನರೂ ನಮ್ಮ ಸಹೋದರರಿದ್ದಂತೆ ಎಂದು ಹೇಳಿದರು.
ಸೌಹಾರ್ದ ಸಭೆಯಲ್ಲಿ ಸಂತ ಸೆಬಾಸ್ಟಿಯನ್ ಚರ್ಚ್ ಪೆರ್ಮನ್ನೂರ್ ಧರ್ಮಗುರು ರೆ.ಫಾ.ಜೆ.ಬಿ.ಸಲ್ದಾನಾ, ಎಸ್‌ಡಿಎಂ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದೇವರಾಜು, ದ.ಕ. ಜಿಲ್ಲಾ ಜಮಾಅತ್ ಇಸ್ಲಾಂ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಶುಭ ಹಾರೈಸಿದರು.
ಸಮಾರಂಭದಲ್ಲಿ ಜಪ್ಪಿನಮೊಗರು ಜುಮ್ಮಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಮದನಿ, ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ರಶೀದ್, ಮಂಗಳೂರು ಮೂಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮಾಜಿ ಮೇಯರ್ ಭಾಸ್ಕರ್ ಕೆ., ಮನಪಾ ಮಾಜಿ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ಡಿ.ಕೆ.ಅಧೋಕ್, ಆಶಾ ಡಿಸಿಲ್ವಾ ಹಾಗೂ ಜಯರಾಮ ಶೇಖ, ಮುಹಮ್ಮದ್ ಗುಲಾಂ, ಜೆ.ಎ.ಸಲೀಂ, ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಪ್ಪಿನಮೊಗರು ಜುಮಾ ಮಸೀದಿಯ ವಿದ್ಯಾರ್ಥಿ ಅಹ್ಮದ್ ಸಹದ್ ಕಿರಾಅತ್ ಪಠಿಸಿದರು.