ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ಕರಮಬೀರ್ ಸಿಂಗ್‌ಗೆ ಮಿಲಿಟರಿ ನ್ಯಾಯಾಲಯದ ಅನುಮತಿ

Update: 2019-05-29 16:46 GMT

ಹೊಸದಿಲ್ಲಿ,ಮೇ 29: ವೈಸ್ ಅಡ್ಮಿರಲ್ ಕರಮಬೀರ್ ಸಿಂಗ್ ಅವರು ಶುಕ್ರವಾರ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ಸಶಸ್ತ್ರ ಪಡೆಗಳ ನ್ಯಾಯಾಧಿಕರಣ(ಎಟಿಎಫ್)ವು ಬುಧವಾರ ಅನುಮತಿ ನೀಡಿತು. ಇದೇ ವೇಳೆ ಅದು ಸಿಂಗ್ ನೇಮಕವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆಯನ್ನು ಜು.17ಕ್ಕೆ ಮುಂದೂಡಿತು.

 ತನ್ನ ಸೇವಾ ಜ್ಯೇಷ್ಠತೆಯನ್ನು ಕಡೆಗಣಿಸಿ ವೈಸ್ ಅಡ್ಮಿರಲ್ ಸಿಂಗ್ ಅವರನ್ನು ನೌಕಾಪಡೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದನ್ನು ಪ್ರಶ್ನಿಸಿ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್ -ಇನ್-ಚೀಫ್ ಆಗಿರುವ ವೈಸ್ ಅಡ್ಮಿರಲ್ ಬಿಮಲ ವರ್ಮಾ ಅವರು ಎಎಫ್‌ಟಿಯ ಮೆಟ್ಟಿಲನ್ನೇರಿದ್ದರು.

ಸಿಂಗ್ ಅವರ ನೇಮಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಲು ಸರಕಾರವು ಹೆಚ್ಚಿನ ಸಮಯಾವಕಾಶವನ್ನು ಕೋರಿದ್ದರಿಂದ ಎಎಫ್‌ಟಿ ವಿಚಾರಣೆಯನ್ನು ಜು.17ಕ್ಕೆ ಮುಂದೂಡಿದೆ ಎಂದು ವರ್ಮಾ ಪರ ವಕೀಲ ಅಂಕುರ ಛಿಬ್ಬರ್ ಸುದ್ದಿಗಾರರಿಗೆ ತಿಳಿಸಿದರು.

ನೂತನ ನೌಕಾಪಡೆ ಮುಖ್ಯಸ್ಥರಾಗಿ ಹಾಲಿ ಅಡ್ಮಿರಲ್ ಸುನಿಲ ಲಾಂಬಾ ಅವರಿಂದ ಅಧಿಕಾರವನ್ನು ವಹಿಸಿಕೊಳ್ಳಲು ಸಿಂಗ್‌ಗೆ ಎಎಫ್‌ಟಿ ಅನುಮತಿ ನೀಡಿದೆ ಮತ್ತು ಅವರ ಮುಂದುವರಿಕೆಯು ಪ್ರಕರಣದ ಅಂತಿಮ ಫಲಿತಾಂಶವನ್ನು ಅವಲಂಬಿಸಿರಲಿದೆ ಎಂದರು. ವರ್ಮಾ ಅತ್ಯಂತ ಹಿರಿಯ ನೇವಲ್ ಕಮಾಂಡರ್ ಆಗಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಕ್ಷಣಾ ಸಚಿವಾಲಯವು ವರ್ಮಾ ಅವರು ತನಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಆದೇಶವನ್ನು ಹೊರಡಿಸಿದ ಬಳಿಕ ಅವರು ಸಿಂಗ್ ನೇಮಕವನ್ನು ಪ್ರಶ್ನಿಸಿ ಎಎಫ್‌ಟಿಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News