ಹಾನಿಕರ ರಾಸಾಯನಿಕವಿರುವ ಶ್ಯಾಂಪೂ ಹಿಂಪಡೆಯಲು ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಸೂಚನೆ

Update: 2019-05-29 16:50 GMT

ಹೊಸದಿಲ್ಲಿ, ಮೇ.29: ಹಾನಿಕರ ರಾಸಾಯನಿಕವಿರುವ ಮಕ್ಕಳ ಶ್ಯಾಂಪೂವನ್ನು ಕೂಡಲೇ ಹಿಂಪಡೆದುಕೊಳ್ಳುವಂತೆ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಂಗಳವಾರ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ತನ್ನ ಉತ್ಪನ್ನಗಳು ಸರಕ್ಷಿತವಾಗಿವೆ ಎಂದು ಬಹುರಾಷ್ಟ್ರೀಯ ಕಂಪೆನಿ ಜಾನ್ಸನ್ ಆ್ಯಂಡ್ ಜಾನ್ಸನ್ ಹೇಳಿಕೊಂಡಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್‌ನ ಮಕ್ಕಳ ಶ್ಯಾಂಪೂವಿನಲ್ಲಿ ಫೋರ್ಮಲ್‌ಡಿಹೈಡ್ ಇರುವುದು ರಾಜಸ್ತಾನದ ಸರಕಾರಿ ಪ್ರಯೋಗಾಲಯದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ. ಫೋರ್ಮಲ್‌ಡಿಹೈಡ್ ಒಂದು ಕ್ಯಾನ್ಸರ್‌ ಕಾರಕ ರಾಸಾಯನಿಕವಾಗಿದೆ. ಭಾರತದ 4,000 ಕೋಟಿ ರೂ.ನ ಮಕ್ಕಳ ಬಳಕೆಯ ವಸ್ತುಗಳ ಮಾರುಕಟ್ಟೆಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ನಾಲ್ಕನೇ ಮೂರು ಭಾಗ ಪಾಲು ಹೊಂದಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಹಾನಿಕರ ಶ್ಯಾಂಪೂ ವಿರುದ್ಧ ಆಯೋಗಕ್ಕೆ ಎಪ್ರಿಲ್‌ನಲ್ಲಿ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್‌ನ ಶ್ಯಾಂಪೂ ಮತ್ತು ಸುಗಂಧಿತ ಪೌಡರ್‌ನ ಮಾದರಿಯನ್ನು ಪರೀಕ್ಷಿಸುವಂತೆ ಆಯೋಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿತ್ತು. ಈ ಆರೋಪವನ್ನು ನಿರಾಕರಿಸಿರುವ ಜಾನ್ಸನ್ ಆ್ಯಂಡ್ ಜಾನ್ಸನ್, ರಾಜಸ್ತಾನ ಸರಕಾರದ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿರುವಂತೆ ತನ್ನ ಶ್ಯಾಂಪೂವಿನಲ್ಲಿ ಹಾನಿಕರ ರಾಸಾಯನಿಕವಿಲ್ಲ. ಈ ಪರೀಕ್ಷೆಯಲ್ಲಿ ಅಪರಿಚಿತ ಮತ್ತು ನಿಖರತೆಯಿಲ್ಲದ ಪರೀಕ್ಷಾ ವಿಧಾನವನ್ನು ಬಳಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News