ಮಾನನಷ್ಟ ಮೊಕದ್ದಮೆ: ನ್ಯಾಯಾಲಯಕ್ಕೆ ಹಾಜರಾಗಲು ರಾಹುಲ್‌ಗೆ ಸೂಚನೆ

Update: 2019-05-29 17:09 GMT

ಅಹ್ಮದಾಬಾದ್, ಮೇ 29: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ಜುಲೈ 12ರಂದು ನ್ಯಾಯಾಲಯದ ಎದುರು ಹಾಜರಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂಚಿಸಲಾಗಿದೆ. 2016ರಲ್ಲಿ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಿದ್ದ ಐದು ದಿನದ ಬಳಿಕ ಅಹ್ಮದಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಭಾರೀ ಹಗರಣ ನಡೆದಿದೆ. ಬ್ಯಾಂಕ್‌ನ ಅಧ್ಯಕ್ಷ ಅಜಯ್ ಪಟೇಲ್ 745.59 ಕೋಟಿ ರೂ. ಮುಖಬೆಲೆಯ ರದ್ದಾದ ನೋಟುಗಳನ್ನು ಬದಲಾಯಿಸಿ ಕೊಟ್ಟಿದ್ದರು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಈ ಬ್ಯಾಂಕಿನ ನಿರ್ದೇಶಕರ ಮಂಡಳಿಯಲ್ಲಿದ್ದಾರೆ. ಮುಂಬೈ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ನಬಾರ್ಡ್ ನೀಡಿದ ಮಾಹಿತಿಯನ್ನು ಆಧರಿಸಿ ಈ ಹೇಳಿಕೆ ನೀಡಿರುವುದಾಗಿ ರಾಹುಲ್ ಮತ್ತು ಸುರ್ಜೆವಾಲಾ ತಿಳಿಸಿದ್ದರು. ಇದು ಸಂಪೂರ್ಣ ಆಧಾರರಹಿತ ಆರೋಪ ಎಂದು ಹೇಳಿದ್ದ ಅಜಯ್ ಪಟೇಲ್ ಇಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಮೇ 27ರಂದು ಹಾಜರಾಗುವಂತೆ ಈ ಮೊದಲು ನ್ಯಾಯಾಲಯ ತಿಳಿಸಿತ್ತು. ಆದರೆ ಗುಜರಾತಿ ಭಾಷೆಯಲ್ಲಿರುವ ದಾಖಲೆ ಪತ್ರಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಲು ಇನ್ನಷ್ಟು ಸಮಯದ ಅಗತ್ಯವಿದೆ. ಅಲ್ಲದೆ ಮೇ 27ರಂದು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಪುಣ್ಯತಿಥಿ ಕಾರ್ಯಕ್ರಮ ಇರುವುದರಿಂದ ಬೇರೆ ದಿನ ನಿಗದಿಗೊಳಿಸುವಂತೆ ರಾಹುಲ್ ಪರ ವಕೀಲರು ಕೋರಿದ್ದರು.

ಅದರಂತೆ ಜುಲೈ 12ರಂದು ನ್ಯಾಯಾಲಯದ ಎದುರು ಹಾಜರಾಗುವಂತೆ ರಾಹುಲ್ ಮತ್ತು ಸುರ್ಜೆವಾಲಾಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News