×
Ad

ಮೂಡುಬಿದಿರೆ ಪುರಸಭಾ ಚುನಾವಣೆ : ಅಲ್ಪ ಗೊಂದಲದೊಂದಿಗೆ ಶಾಂತಿಯುತ ಮತದಾನ

Update: 2019-05-29 22:41 IST

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ 23 ವಾರ್ಡ್‍ಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಸಣ್ಣಪುಟ್ಟ ಗೊಂದಲಗಳು ಹೊರತುಪಡಿಸಿ ಶಾಂತಿಯುತವಾಗಿ ನಡೆದಿದೆ. 

ಜೈನಪೇಟೆಯ ಡಿ.ಜೆ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರದ ತಾಂತ್ರಿಕ ದೋಷದಿಂದಾಗಿ 15 ನಿಮಿಷಗಳ ತಡವಾಗಿ ಮತದಾನ ಪ್ರಾರಂಭವಾಯಿತು. ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹಾಗೂ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಜೈನಪೇಟೆ ಹಾಗೂ ಪ್ರಾಂತ್ಯದಲ್ಲಿ ಮತದಾನಕ್ಕೆ ಬರುವ ಮತದಾರರ ವಾಹನಗಳನ್ನು ನಿಲ್ಲಿಸುವ ಕುರಿತು ಗೊಂದಲ ಉಂಟಾಯಿತು. ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಇದೇ ವಾರ್ಡ್‍ನಲ್ಲಿ ಮತದಾರರ ಜೊತೆ ತೆರಳುವ ಎಸ್‍ಡಿಪಿಐ ಕಾರ್ಯಕರ್ತರ ಬಗ್ಗೆ ಸಿಪಿಐಎಂ ಪಕ್ಷದ ಕಾರ್ಯಕರ್ತರು ಆಕ್ಷೇಪಿಸಿದರು.

ವಾರ್ಡ್ 13 ಹೋಲಿ ರೋಸರಿ ಶಾಲೆಯಲ್ಲಿನ ಮತದಾನ ಕೇಂದ್ರಕ್ಕೆ ಕಾಲು ನೋವಿನಿಂದ ಬಳಲುತ್ತಿರುವ ರೋಸಲಿನ್ ಎಂಬವರು ಮಧ್ಯಾಹ್ನ 12 ಗಂಟೆಗೆ ಮತದಾನ ಮಾಡಲು ಬಂದಿದ್ದು, ಗಾಲಿ ಕುರ್ಚಿ ಇಲ್ಲದಿರುವುದರಿಂದ 12.45ಕ್ಕೆ ಮತದಾನ ಮಾಡಿದರು. ಕುರ್ಚಿ ವ್ಯವಸ್ಥೆ ಇಲ್ಲದಿರುವ ಕಾರಣ ಮೂಕ್ಕಾಲು ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗಿನ ಸಮಯದಲ್ಲಿ ಹೆಚ್ಚಿನ ಮತದಾರರು ಮತದಾನ ಮಾಡಿದರು ಮಧ್ಯಾಹ್ನದ ವೇಳೆಗೆ ಎಲ್ಲಾ ಮತಗಟ್ಟೆಗಳಲ್ಲಿ ನಿಧಾನ ಗತಿಯಲ್ಲಿ ಮತದಾನ ನಡೆಯುತ್ತಿರುವುದು ಕಂಡು ಬಂತು. ಉಳಿದಂತೆ ಬಹುತೇಕ ಎಲ್ಲ ವಾರ್ಡ್‍ಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಕಾಂಗ್ರೆಸ್‍ನ 22, ಬಿಜೆಪಿಯ 23, ಜೆಡಿಎಸ್‍ನ 8, ಸಿಪಿಐಎಂನ 3, ಬಿಎಸ್.ಪಿ.ಯ 14, ಎಸ್.ಡಿ.ಪಿ.ಐನ 3, ಹಾಗೂ 4 ಮಂದಿ ಪಕ್ಷೇತರರು ಸೇರಿದಂತೆ ಒಟ್ಟು 77 ಅಭ್ಯರ್ಥಿಗಳು ಸ್ಪರ್ಧಾ ಅಖಾಢದಲ್ಲಿದ್ದು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಉತ್ಸಾಹದಿಂದ ಮತಗಟ್ಟೆಯ ಸಮೀಪ ಕಂಡು ಬಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News