ಮರಾಠಿಯಲ್ಲಿ ಯಕ್ಷಗಾನ: ಪುಣೆ ವಿದ್ವಾಂಸರ ತಂಡದಿಂದ ಅಧ್ಯಯನ

Update: 2019-05-29 17:14 GMT

ಉಡುಪಿ, ಮೇ 29: ಈವರೆಗೆ ಹಿಂದಿ, ಇಂಗ್ಲಿಷ್, ಸಂಸ್ಕೃತ, ತುಳು, ಕನ್ನಡ ಭಾಷೆಗಳಲ್ಲಿ ಮಾತ್ರ ಪ್ರದರ್ಶನ ಕಾಣುತ್ತಿದ್ದ ಕರಾವಳಿಯ ಪ್ರಮುಖ ಕಲೆ ಯಕ್ಷಗಾನವು ಇದೀಗ ಮರಾಠಿ ಭಾಷೆಗೂ ವಿಸ್ತಾರಗೊಳ್ಳುವ ತಯಾರಿಯಲ್ಲಿದೆ. ಇಂತಹ ಸಾಹಸಕ್ಕೆ ಮಹಾರಾಷ್ಟ್ರ ರಾಜ್ಯದ ಪುಣೆಯ ಸಾಂಸ್ಕೃತಿಕ ವಿದ್ವಾಂಸರ ತಂಡವೊಂದು ಮುಂದಾಗಿದೆ.

ಪುಣೆಯ ಪ್ರೊ.ಗುರುರಾಜ್ ಕುಲಕರ್ಣಿ, ಪ್ರೊ.ಜಯಂತ್ ಗಾಡ್ಗಿಲ್, ಪ್ರೊ. ಮಂಗೇಶ್ ಜೋಶಿ, ಪ್ರೊ.ವಿಜಯಕುಮಾರ್ ಪಿ.ಸಾವಂತ್‌ವಾಡಿ, ಶ್ರೀರಾಮ್ ಹಳ್ಳೂರು ವಿದ್ವಾಂಸರ ತಂಡ ಇಂದು ಉಡುಪಿ ಯಕ್ಷಗಾನ ಕೇಂದ್ರಕ್ಕೆ ಆಗಮಿಸಿ ಮರಾಠಿ ಭಾಷೆಯಲ್ಲಿ ಯಕ್ಷಗಾನವನ್ನು ಆರಂಭಿಸುವ ಸಾಧ್ಯತೆ ಕುರಿತು ಅಧ್ಯಯನ ನಡೆಸಿದೆ.

ಈ ತಂಡ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಅಭಿಮನ್ಯು ಕಾಳಗ’ ಹಾಗೂ ‘ಜಟಾಯು ಮೋಕ್ಷ’ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿದೆ. ಅಲ್ಲದೆ ಯಕ್ಷಗಾನ ಕುರಿತ ಪುಸ್ತಕಗಳ ಅಧ್ಯಯನ, ವೇಷಭೂಷಣ, ಅರ್ಥಗಾರಿಕೆ, ಬಣ್ಣ ಹಚ್ಚುವಿಕೆ ಸೇರಿದಂತೆ ವಿವಿಧ ಆಯಾಮಗಳನ್ನು ಈ ತಂಡ ಬಹಳ ಹತ್ತಿರ ದಿಂದ ನೋಡಿ ತಿಳಿದುಕೊಂಡಿದೆ. ನಾಳೆ ಕೂಡ ಈ ತಂಡ ಇಲ್ಲೇ ಉಳಿದುಕೊಂಡು ಅಧ್ಯಯನ ಮುಂದುವರೆಸಲಿದೆ. ಇವರಿಗೆ ಕೇಂದ್ರದ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ಯಕ್ಷಗುರು ಸಂಜೀವ ಸುವರ್ಣ ಸಹಕಾರ ನೀಡಿದ್ದಾರೆ.

ಮಹಾರಾಷ್ಟ್ರ ರಾಜ್ಯಕ್ಕೆ ವಿಸ್ತರಣೆ: ಮರಾಠಿ ಭಾಷೆಯ ಯಕ್ಷಗಾನ ಕಲೆ ಯನ್ನು ಮೊದಲು ಮಹಾರಾಷ್ಟ್ರ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾಗಿರುವ ಪುಣೆಯಲ್ಲಿ ಆರಂಭಿಸಿ ಮುಂದೆ ನಾಗಪುರ, ಮುಂಬೈಯಂತಹ ಮಹಾನಗರ ಗಳಿಗೆ ಕೊಂಡೊಯ್ಯುವ ಇರಾದೆಯನ್ನು ಈ ತಂಡ ಹೊಂದಿದೆ.

‘ಕರ್ನಾಟಕ ರಾಜ್ಯದ ಬಹಳ ಪ್ರಮುಖ ಕಲಾ ಪ್ರಕಾರವಾಗಿರುವ ಯಕ್ಷಗಾನ ಈವರೆಗೆ ಮಹಾರಾಷ್ಟ್ರದಲ್ಲಿ ಪರಿಚಯವಾಗಿಲ್ಲ. ಮರಾಠಿ ರಂಗಭೂಮಿಯ ಮೂಲ ಕರ್ನಾಟಕ ರಾಜ್ಯ ಆಗಿದ್ದು, ಅದೇ ರೀತಿಯಲ್ಲಿ ನಮ್ಮ ಪ್ರಯತ್ನದಿಂದ ಯಕ್ಷಗಾನ ಕಲೆ ಕೂಡ ಮರಾಠಿ ಸಾಂಸ್ಕೃತ ಲೋಕಕ್ಕೆ ಮತ್ತೊಂದು ಹೊಸ ಕಲಾ ಪ್ರಕಾರವಾಗಿ ಸೇರ್ಪಡೆಗೊಳ್ಳಲಿದೆ’ ಎಂದು ಪೊ್ರ.ಗುರುರಾಜ್ ಕುಲಕರ್ಣಿ ತಿಳಿಸಿದ್ದಾರೆ.

ಯಕ್ಷಗಾನದ ಮೂಲ ಸ್ವರೂಪಕ್ಕೆ ಯಾವುದೇ ದಕ್ಕೆ ಬಾರದಂತೆ ಕಲೆಯನ್ನು ಮುಂದುವರೆಸಿಕೊಂಡು ಹೋಗುವ ಉದ್ದೇಶ ಹೊಂದಲಾಗಿದೆ. ಆರಂಭದಲ್ಲಿ ಭಾಗವತಿಕೆಯಲ್ಲಿ ಕನ್ನಡಿಗರು ಹಾಗೂ ಕಲಾವಿದರಾಗಿ ಮರಾಠಿಗರನ್ನು ಸೇರಿಸಿ ಪ್ರದರ್ಶಿಸಲಾಗುವುದು. ಮುಂದೆ ನಮ್ಮವರಿಗೂ ಭಾಗವತಿಕೆ ಕಲಿಸಿ ಪರಿಪೂರ್ಣ ಮರಾಠಿ ಯಕ್ಷಗಾನವನ್ನಾಗಿ ಮಾಡುವ ಯೋಚನೆ ನಮ್ಮಲ್ಲಿದೆ. ಮಹಾರಾಷ್ಟ್ರ ದಲ್ಲಿ ರಂಗಭೂಮಿ ಎಂಬುದು ಬಹಳಷ್ಟು ಕ್ರಿಯಾಶೀಲ ವಾಗಿರುವುದರಿಂದ ಯಕ್ಷಗಾನಕ್ಕೆ ಉತ್ತಮ ಪ್ರೇಕ್ಷಕರು ಸಿಗಬಹುದು ಎಂಬ ಆಶಯ ಹೊಂದಿದ್ದೇವೆ ಎಂದರು.

ಪ್ರಸಂಗಗಳ ಸಂಕಲನ ರಚನೆ: ಯಕ್ಷಗಾನವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಕೊಂಡೊಯ್ಯುವ ಮೊದಲ ಹೆಜ್ಜೆಯಾಗಿ ಈ ವಿದ್ವಾಂಸರ ತಂಡ ಕನ್ನಡದಲ್ಲಿರುವ ಯಕ್ಷಗಾನ ಪ್ರಸಂಗಗಳನ್ನು ಮರಾಠಿಗೆ ಅನುವಾದ ಮಾಡಿ ಪುಸ್ತಕ ರಚಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಅಭಿಮನ್ಯು ಕಾಳಗ, ವಾಲಿ ಮೋಕ್ಷ, ಪಾಂಡವರ ವನವಾಸ ಸೇರಿದಂತೆ ಏಳೆಂಟು ಕನ್ನಡದಲ್ಲಿರುವ ಯಕ್ಷಗಾನ ಪ್ರಸಂಗಗಳನ್ನು ಮರಾಠಿಗೆ ಭಾಷಾಂತರ ಮಾಡಿ ಪುಸ್ತಕ ರಚಿಸಲಾಗುತ್ತದೆ. ಮುಂದೆ ಅದರಲ್ಲಿ ಒಂದೆರಡು ಪ್ರಂಸಗಗಳನ್ನು ಅಭ್ಯಾಸ ಮಾಡಿ ಮೊತ್ತ ಮೊದಲ ಮರಾಠಿ ಯಕ್ಷಗಾನದ ಪ್ರದರ್ಶನವನ್ನು ಪುಣೆಯಲ್ಲಿ ಪ್ರದರ್ಶಿಸಲಾಗುವುದು ಎಂದು ಪೊ್ರ.ಗುರುರಾಜ್ ಕುಲಕರ್ಣಿ ತಿಳಿಸಿದ್ದಾರೆ.

‘ಯಕ್ಷಗಾನಕ್ಕೆ ಸಂಬಂಧಿಸಿ ಮರಾಠಿ ಭಾಷೆಯಲ್ಲಿ ಯಕ್ಷಗಾನ ಕಲೆ ಮತ್ತು ಅಭ್ಯಾಸ ಎಂಬ ಕೃತಿಯನ್ನು ನಾನು ರಚಿಸಿದ್ದು, ನಾಲ್ಕೈದು ತಿಂಗಳ ಹಿಂದೆ ಈ ಕೃತಿಯನ್ನು ಬಿಡುಗಡೆಗೊಳಿಸಲಾಗಿದೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿ ರುವ ಮರಾಠಿ ಭಾಷೆ ತಿಳಿದಿರುವ ಕನ್ನಡಿಗರಿಗೆ ಈ ಕೃತಿ ಬಹಳಷ್ಟು ಮೆಚ್ಚುಗೆ ಯಾಗಿದೆ’ ಎಂದು ಪ್ರೊ.ವಿಜಯಕುಮಾರ್ ಪಿ.ಸಾವಂತ್‌ವಾಡಿ ತಿಳಿಸಿದ್ದಾರೆ.

‘ಯಕ್ಷಗಾನವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮೊದಲು ಸಂಘವನ್ನು ಕಟ್ಟಿಕೊಂಡು ಆ ಮೂಲಕ ಮರಾಠಿಯಲ್ಲಿ ಯಕ್ಷಗಾನ ಕಲಿಸುವ ಪ್ರಯತ್ನ ಮಾಡುತ್ತೇವೆ. ಪುಣೆಯಲ್ಲಿರುವ ಕನ್ನಡ ಸಂಘದವರು ಈ ಮೊದಲು ಅಲ್ಲಿನ ಯುವಕರಿಗೆ ಯಕ್ಷಗಾನ ಕಲಿಸಲು ಮುಂದಾಗಿದ್ದರು. ಆದರೆ ಅಲ್ಲಿರುವ ಕನ್ನಡಿಗ ಯುವಕರಿಗೆ ಸರಿಯಾಗಿ ಕನ್ನಡ ಬಾರದ ಹಿನ್ನೆಲೆಯಲ್ಲಿ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಪುಣೆಯಲ್ಲಿ ಸುಮಾರು 2.5ಲಕ್ಷ ಕನ್ನಡಿಗರಿದ್ದಾರೆ. ನಾವು ಮರಾಠಿಯಲ್ಲಿ ಯಕ್ಷಗಾನ ರಚಿಸುವುದರಿಂದ ಭಾಷೆಯ ತೊಡಕು ಆಗುವುದಿಲ್ಲ ಎಂಬ ವಿಶ್ವಾಸ ಇದೆ’
-ಪ್ರೊ.ಗುರುರಾಜ್ ಕುಲಕರ್ಣಿ ಪುಣೆ

‘ಬೇರೆ ಬೇರೆ ಭಾಷೆಯಲ್ಲಿ ಪ್ರದರ್ಶನ ಕಂಡಿರುವ ಯಕ್ಷಗಾನ ಇದೀಗ ಮರಾಠಿಗೂ ಕಾಲಿಡುವ ಹಂತಕ್ಕೆ ಬಂದಿದೆ. ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆ ಗಳಿಗೂ ವಿಸ್ತಾರಗೊಳ್ಳದ ಈ ಕಲೆಯ ಬಗ್ಗೆ ಆಸಕ್ತಿ ಹೊಂದಿ ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯಲ್ಲಿ ಆರಂಭಿಸಲು ಮುಂದೆ ಬಂದಿರುವುದು ಸ್ವಾಗತಾರ್ಹ. ಅವರಿಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು.’
-ಸಂಜೀವ ಸುವರ್ಣ, ಯಕ್ಷಗುರು, ಯಕ್ಷಗಾನ ಕೇಂದ್ರ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News