ಮೇ 30ರಂದು ಮೋದಿ ಸಂಪುಟ ಪ್ರಮಾಣ

Update: 2019-05-29 17:22 GMT

ಹೊಸದಿಲ್ಲಿ, ಮೇ 29: ನರೇಂದ್ರ ಮೋದಿ ಅವರು ನಿರಂತರ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಮೇ 30ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಇತರ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.

ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ, ಜೆಡಿಎಸ್ ನಾಯಕ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಆಪ್ ವರಿಷ್ಠ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಮಮತಾ ಬ್ಯಾನರ್ಜಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರು. ಆದರೆ, ಪಶ್ಚಿಮಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ ಬಲಿಯಾದ ಬಿಜೆಪಿಯ 54 ಮಂದಿ ಕಾರ್ಯಕರ್ತರ ಸಂಬಂಧಿಕರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿರುವುದು ವರದಿಯಾದ ಬಳಿಕ ಅವರು ತನ್ನ ನಿಲುವನ್ನು ಬದಲಾಯಿಸಿ ಸಮಾರಂಭದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

 ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಅಬ್ದುಲ್ ಹಾಮಿದ್, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಕಿರ್ಗಿಝ್ ರಿಪಬ್ಲಿಕ್‌ನ ಅಧ್ಯಕ್ಷ ಸೂರೋನ್‌ಬೇ ಜೀನ್‌ಬೆಕೋವ್, ಮ್ಯಾನ್ಮಾರ್‌ನ ಅಧ್ಯಕ್ಷ ಯು ವಿನ್ ಮಿಂಟ್, ಮಾರಿಷಶ್ ಪ್ರಧಾನ ಮಂತ್ರಿ ಪ್ರವಿಂದ್ ಕುಮಾರ್ ಜಗ್ನೌತ್, ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ, ಭೂತಾನ್ ಪ್ರಧಾನ ಮಂತ್ರಿ ಡಾ. ಲೊಟೆ ತ್ಸೇರಿಂಗ್, ಥಾಲ್ಯಾಂಡ್‌ನ ವಿಶೇಷ ರಾಜತಾಂತ್ರಿಕ ಗ್ರಿಸಾಡಾ ಬೂನ್‌ರ್ಯಾಕ್ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಜಗತ್ತಿನ ಪ್ರಮುಖರು.

ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಎರಡನೇ ಬಾರಿ ಕೂಡ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಮೂರು ದೇಶಗಳ ಪ್ರವಾಸದಲ್ಲಿ ಇದ್ದಾರೆ.

ಕಾರ್ಯಕ್ರಮ ಪ್ರಸಾರ

ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ದೂರದರ್ಶನದಲ್ಲಿ ಇಂದು 6.30ರಿಂದ ಲೈವ್ ಟೆಲಿಕಾಸ್ಟ್ ಆಗಲಿದೆ. ಸಮಾರಂಭವನ್ನು ರಾಷ್ಟ್ರಪತಿ ಭವನ ದೂರದರ್ಶನದ ಯು ಟ್ಯೂಬ್ ಚಾನೆಲ್‌ನಲ್ಲಿ ಕೂಡ ಪ್ರಸಾರ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News