ದನದ ವ್ಯಾಪಾರಿ ಹುಸೇನಬ್ಬ ಕೊಲೆ ಪ್ರಕರಣಕ್ಕೆ ಒಂದು ವರ್ಷ: ಎಫ್‌ಎಸ್‌ಎಲ್ ವರದಿಯ ನಿರೀಕ್ಷೆ
ಉಡುಪಿ, ಮೇ 29: ದನ ಸಾಗಾಟ ಆರೋಪದಲ್ಲಿ ಬಜರಂಗದಳದ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಹಿರಿಯಡ್ಕ ಪೊಲೀಸ್ ಜೀಪಿನಲ್ಲಿ ಮೃತಪಟ್ಟ ಮಂಗಳೂರು ಜೋಕಟ್ಟೆಯ ಹುಸೇನಬ್ಬ (62) ಕೊಲೆ ಪ್ರಕರಣಕ್ಕೆ (ಮೇ 30) ಒಂದು ವರ್ಷ ತುಂಬಿದ್ದು, ಪ್ರಕರಣಕ್ಕೆ ಸಂಬಂಧಿಸಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕಾಗಿದೆ.
ಪೆರ್ಡೂರು ಶೇನರಬೆಟ್ಟು ಎಂಬಲ್ಲಿ 2018ರ ಮೇ 30ರಂದು ಬೆಳಗಿನ ಜಾವ 4ಗಂಟೆಗೆ ಅಕ್ರಮ ದನ ಸಾಗಾಟದ ಆರೋಪದಲ್ಲಿ ಬಜರಂಗದಳದ ಕಾರ್ಯಕರ್ತರು ಹಾಗೂ ಹಿರಿಯಡ್ಕ ಪೊಲೀಸರು ಸ್ಕಾರ್ಪಿಯೋ ವಾಹನವನ್ನು ತಡೆದು ಅದರಲ್ಲಿದ್ದ ಹುಸೇನಬ್ಬರಿಗೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಸ್ಕಾರ್ಪಿಯೋವನ್ನು ಜಖಂಗೊಳಿಸಿದ್ದರು. ಈ ವೇಳೆ ಸ್ಕಾರ್ಪಿಯೋದಲ್ಲಿದ್ದ ಇಬ್ಬರು ಓಡಿ ಹೋಗಿದ್ದರು.
ಗಂಭೀರವಾಗಿ ಗಾಯಗೊಂಡ ಹುಸೇನಬ್ಬರನ್ನು ಬಳಿಕ ಇಲಾಖಾ ಜೀಪಿನಲ್ಲಿ ಠಾಣೆಗೆ ಕರೆ ತರಲಾಗಿತ್ತು. ಗಂಭೀರವಾಗಿ ಹಲ್ಲೆಗೆ ಒಳಗಾಗಿದ್ದ ಹುಸೇನಬ್ಬ ಜೀಪಿನ ಹಿಂಬದಿ ಕುಳಿತಲ್ಲಿಯೇ ಮೃತಪಟ್ಟಿದ್ದರೆಂದು ತನಿಖೆಯಿಂದ ತಿಳಿದು ಬಂದಿತ್ತು. ನಂತರ ಪೊಲೀಸರು ಬಜರಂಗದಳದ ಕಾರ್ಯಕರ್ತರೊಂದಿಗೆ ಸೇರಿ ಮೃತದೇಹವನ್ನು ಪೆರ್ಡೂರು ಕೊತ್ಯಾರು ಹಾಡಿಯಲ್ಲಿ ಎಸೆದು ಬಂದಿದ್ದರು. ನಂತರ ಮರುದಿನ ಪೊಲೀಸರು, ಹುಸೇನಬ್ಬ ದನದ ವಾಹನವನ್ನು ತಡೆಗಟ್ಟಿದ ವೇಳೆ ಭಯದಿಂದ ಓಡಿ ಹೋಗುವಾಗ ಹೃದಯಾಘಾತದಿಂದ ಮೃತಪಟ್ಟಿರ ಬಹುದೆಂದು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಆಗಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರ್ಗಿ ನೇತೃತ್ವದ ತಂಡ ಪ್ರಮುಖ ಆರೋಪಿಗಳಾದ ಬಜರಂಗದಳದ ಮುಖಂಡ ಸುರೇಶ್ ಮೆಂಡನ್ ಹಾಗೂ ಇತರರನ್ನು ಬಂಧಿಸಿದ್ದರು. ತನಿಖೆ ಮುಂದುವರೆಸಿದ ಪೊಲೀಸರಿಗೆ ಹುಸೇನಬ್ಬ ಪೊಲೀಸ್ ಜೀಪಿನಲ್ಲಿಯೇ ಮೃತ ಪಟ್ಟಿದ್ದಾರೆ ಹಾಗೂ ಪೊಲೀಸರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆಂಬ ಮಹತ್ವದ ಸುಳಿವು ದೊರೆಯಿತು.
ಅದರಂತೆ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಹಾಗೂ ಹೆಡ್‌ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್, ಠಾಣಾ ಜೀಪು ಚಾಲಕ ಗೋಪಾಲ್ ನಾಯ್ಕಾರನ್ನು ಪೊಲೀಸರು ಬಂಧಿಸಿದ್ದರು. ಹೀಗೆ ತನಿಖೆ ನಡೆಸಿದ ಪೊಲೀಸ್ ತಂಡ ಒಟ್ಟು 15 ಮಂದಿ ಆರೋಪಿಗಳನ್ನು ಗುರುತಿಸಿ, 13 ಮಂದಿಯನ್ನು ಬಂಧಿಸಿತ್ತು.
ತಲೆಗೆ ಹೊಡೆದು ಹುಸೇನಬ್ಬರನ್ನು ಕೊಲೆ ಮಾಡಲಾಗಿದೆ ಎಂಬುದು ನಂತರ ಬಂದ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು. ಇದರಲ್ಲಿ ಪೊಲೀಸರು ಭಾಗಿಯಾಗಿದ್ದುದರಿಂದ ಪ್ರಕರಣದ ತನಿಖೆಯನ್ನು ಸಿಒಡಿ ಪೊಲೀಸರು ಕೈಗೆತ್ತಿ ಕೊಂಡಿದ್ದರು. ಜೂ.17ರಂದು ಸಿಒಡಿ ಅಧಿಕಾರಿಗಳು ಉಡುಪಿಗೆ ಆಗಮಿಸಿ ತನಿಖೆ ನಡೆಸಿದ್ದರು.
ಎಲ್ಲ 15 ಆರೋಪಿಗಳಿಗೂ ಜಾಮೀನು
ಈ ಅಮಾನುಷ ಹತ್ಯೆಗೆ ಒಂದು ವರ್ಷ ತುಂಬುವ ಮೊದಲೇ ಪ್ರಕರಣದ ಎಲ್ಲ 15 ಮಂದಿ ಆರೋಪಿಗಳಿಗೂ ವಿವಿಧ ನ್ಯಾಯಾಲಯಗಳು ಜಾಮೀನು ನೀಡಿ ಬಿಡುಗಡೆಗೊಳಿಸಿವೆ.
ಕೃತ್ಯಕ್ಕೆ ಸಂಚು ರೂಪಿಸಿದ ಸುರೇಶ್ ಮೆಂಡನ್ ಯಾನೆ ಸೂರಿ (43), ಶೈಲೇಶ್ ಶೆಟ್ಟಿ(19), ಚೇತನ್ ಆಚಾರಿ(22), ರತನ್ ಪೂಜಾರಿ(22), ಉಮೇಶ್ ಶೆಟ್ಟಿ(28), ದೀಪಕ್ ಹೆಗ್ಡೆ ಮತ್ತು ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಸಾಕ್ಷನಾಶ ಮಾಡಲು ಪ್ರಯತ್ನಿಸಿದ ಆಗಿನ ಹಿರಿಯಡ್ಕ ಠಾಣಾ ಉಪ ನಿರೀಕ್ಷಕ ಡಿ.ಎನ್.ಕುಮಾರ್(53), ಸಾಕ್ಷನಾಶ ಮಾಡಿರುವ ಹೆಡ್‌ಸ್ಟೇಬಲ್ ಮೋಹನ್ ಕೊತ್ವಾಲ್, ಠಾಣಾ ಜೀಪು ಚಾಲಕ ಗೋಪಾಲ್ ನಾಯ್ಕ, ದಿನೇಶ್ ಮೆಂಡನ್, ಪ್ರಸಾದ್ ಎಚ್.ಕೊಂಡಾಡಿ, ತುಕರಾಮ ನಾಯ್ಕ(35), ಗಣೇಶ್ ನಾಯ್ಕ(24), ಕುಶಾಲ ನಾಯ್ಕ, ಸುನೀಲ್ ಶೇರಿಗಾರ್ ಈ ಪ್ರಕರಣದ ಆರೋಪಿಗಳು.
ಇವರಲ್ಲಿ ಕೆಲವರಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ, ಇನ್ನು ಕೆಲವರಿಗೆ ಹೈಕೋರ್ಟ್‌ನಲ್ಲಿ ಮತ್ತು ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಮೆಂಡನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಬಂಧನವಾಗದೆ ತಲೆಮರೆಸಿಕೊಂಡಿದ್ದ ಕುಶಾಲ ನಾಯ್ಕ ಹಾಗೂ ಸುನೀಲ್ ಶೇರಿಗಾರ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಜು.24ಕ್ಕೆ ಮುಂದಿನ ವಿಚಾರಣೆ
ಪ್ರಕರಣದ ತನಿಖೆ ನಡೆಸಿದ ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಓಡಿ ಡಿವೈಎಸ್ಪಿ ಚಂದ್ರಶೇಖರ್ 506 ಪುಟಗಳ ಮೂರು ಸಂಪುಟಗಳ ದೋಷಾ ರೋಪಣಾ ಪಟ್ಟಿಯನ್ನು 2018ರ ಆ.29ರಂದು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ಈ ಪ್ರಕರಣದಲ್ಲಿ ಒಟ್ಟು 83 ಸಾಕ್ಷಿಗಳನ್ನು ಗುರುತಿಸಲಾಗಿದೆ.
ರಕ್ತ ಹಾಗೂ ಇತರ ವಿಚಾರಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋ ಗಾಲಯದ ವರದಿ ಇನ್ನಷ್ಟೆ ತನಿಖಾಧಿಕಾರಿಗಳ ಕೈಸೇರಬೇಕಾಗಿದೆ. ವರದಿ ಬಂದ ಕೂಡಲೇ ತನಿಖಾಧಿಕಾರಿಗಳು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಪ್ರಸ್ತುತ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆರೋಪಿಗಳ ದೋಷಾರೋಪ ವಾಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ವಿಚಾರಣೆಯನ್ನು ಜು.24ಕ್ಕೆ ಮುಂದೂಡಲಾಗಿದೆ. ಈ ದಿನಾಂಕದಂದು ಆರೋಪಿಗಳು ತಮ್ಮ ಮೇಲಿನ ಆರೋಪ ನಿರಾಕರಣೆ ಮಾಡಿದರೆ ಮುಂದೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.