×
Ad

ಪಿಎಫ್‌ಗಾಗಿ ಆನ್‌ಲೈನ್ ಅರ್ಜಿ ಕಡ್ಡಾಯ ವಿರೋಧಿಸಿ ಧರಣಿ

Update: 2019-05-30 18:15 IST

ಉಡುಪಿ, ಮೇ 30: ಭವಿಷ್ಯ ನಿಧಿ, ಕ್ಲೈಮ್, ಪಿಂಚಣಿ ಮೊದಲಾದ ಅರ್ಜಿ ಯನ್ನು ಆನ್‌ಲೈನ್ ಸಲ್ಲಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ, ಪಿಎಫ್ (ಭವಿಷ್ಯ ನಿಧಿ) ಸಮಸ್ಯೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ವತಿಯಿಂದ ಬೀಡಿ ಕಾರ್ಮಿಕರು ಗುರುವಾರ ಉಡುಪಿ ಪಿಎಫ್ ಚೇರಿ ಎದುರು ಧರಣಿ ನಡೆಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ.ಭಟ್ ಮಾತನಾಡಿ, ಅವಿದ್ಯಾವಂತ ಬಡ ಬೀಡಿ ಕಾರ್ಮಿಕರಿಗೆ ಭವಿಷ್ಯ ನಿಧಿಯನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಲು ಆನ್‌ಲೈನ್ ಕಡ್ಡಾಯ ಮಾಡಿರುವುದು ಸರಿಯಲ್ಲ. ಆದುದರಿಂದ 2015ರ ಮೊದಲಿನ ಕಾರ್ಮಿಕ ರಿಂದ ಹಿಂದಿನಂತೆ ಬರಹದ ಮೂಲಕ ಅರ್ಜಿಯನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.

ಭವಿಷ್ಯ ನಿಧಿ ದಾಖಲೆಯನ್ನು ಆಧಾರ ಕಾರ್ಡ್‌ಗೆ ಅನುಗುಣವಾಗಿ ತಿದ್ದು ಪಡಿ ಮಾಡಲು ಅವಕಾಶ ನೀಡಬೇಕು. ಕಾರ್ಮಿಕರಲ್ಲಿ ಇಲ್ಲದ ದಾಖಲೆಗಳನ್ನು ಕೇಳಿ ಸತಾಯಿಸುವುದು, ಮಾನಸಿಕ ಹಿಂಸೆ ನೀಡುವುದು ನಿಲ್ಲಿಸಬೇಕು. ಇ-ಪಿಎಫ್‌ಗೆ ಸದಸ್ಯರನ್ನು ಸೇರಿಸುವಾಗ ಅಧಿಕಾರಿಗಳು ಮಾಡುವ ತಪ್ಪುಗಳನ್ನು ಬೀಡಿ ಕಾರ್ಮಿಕರ ಮೇಲೆ ಹೇರಬಾರದು ಎಂದು ಅವರು ಹೇಳಿದರು.

ಬಳಿಕ ಈ ಕುರಿತ ಮನವಿಯನ್ನು ಪಿಎಫ್ ಉಡುಪಿ ವಿಭಾಗದ ಆಯುಕ್ತರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಕಾರ್ಯದರ್ಶಿ ರಾಧಾಕೃಷ್ಣ ಸರಪ್ಪಾಡಿ, ರಾಜ್ಯ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ, ಕರಾವಳಿ ಬೀಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣ ರೈ, ಬೀಡಿ ಗುತ್ತಿಗೆದಾರ ಸುಂದರ್ ಕೋಟ್ಯಾನ್, ಈಶ್ವರಿ, ಜಯರಾಮ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News