ಮರ್ಣೆ: ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಸವಲತ್ತು ವಿತರಣೆ
ಉಡುಪಿ, ಮೇ 30:ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ರಾಧಾ ನಾಯಕ್ ಸರಕಾರಿ ಪ್ರೌಢ ಶಾಲೆಯ ಪ್ರಾರಂಭೋತ್ಸವವು ಶಾಲೆಯ ರಾಧಾ ನಾಯಕ್ ಆಡಿಟೋರಿಯಂನಲ್ಲಿ ಬುಧವಾರ ನಡೆಯಿತು.
ರಾಧಾ ನಾಯಕ್ ಎಜುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಶಿವಕುಮಾರ್ ಕುರ್ಪಾಡಿಗುತ್ತು ಅವರು ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನೀಡಲಾಗು ವಂತೆ ಉತ್ತಮ ದರ್ಜೆಯ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು, ಕೊಡೆ ಹಾಗೂ ಕಂಪಾಸ್ ಬಾಕ್ಸ್‌ಗಳನ್ನು ನೂತನವಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳೂ ಸೇರಿದಂತೆ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿತರಿಸಿದರು. ಜೊತೆಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ಸರಕಾರಕ್ಕೆ ಭರಿಸಬೇಕಾಗಿರುವ ಸಂಪೂರ್ಣ ಶುಲ್ಕವನ್ನೂ ಟ್ರಸ್ಟ್ ವತಿಯಿಂದಲೇ ನೀಡಲಾಗುತ್ತಿದೆ.
ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ನಾಯಕ್, ಶಾಲೆಗೆ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರವನ್ನು ಸಭೆಯಲ್ಲಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲಾ ವಿದ್ಯಾರ್ಥಿ ಗಳು, ಹಳೇ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.