ಉಡುಪಿ ಮಲ್ಲಿಗೆ ಬೆಳೆಗಾರರಿಗೆ ವೈಜ್ಞಾನಿಕ ಕೃಷಿ ಮಾಹಿತಿ

Update: 2019-05-30 15:55 GMT

ಶಿರ್ವ, ಮೇ 30: ಮಲ್ಲಿಗೆ ಬೆಳೆಗಾರರು ಹಳೆಯ ಕೃಷಿ ಪದ್ದತಿಯಲ್ಲಿ ಪರಿ ವರ್ತನೆ ಮೂಲಕ ವೈಜ್ಞಾನಿಕ ಕೃಷಿ ಪದ್ದತಿಯನ್ನು ಅನುಸರಿಸಬೇಕು. ಆಗ ಮಾತ್ರ ಅತೀ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ. ಈ ಕುರಿತು ಇಲಾಖೆ ಯಿಂದ ಮಾರ್ಗದರ್ಶಕ ಕೈಪಿಡಿಯೊಂದಿಗೆ ತರಬೇತಿ ನೀಡಲಾಗುವುದು ಎಂದು ಉಡುಪಿ ತೋಟಗಾರಿಕಾ ಇಲಾಖೆಯ ಉಡುಪಿ ಪುಷ್ಪಹರಾಜು ಕೇಂದ್ರದ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ, ಪುಷ್ಪಹರಾಜು ಕೇಂದ್ರ, ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಶಿರ್ವ ರೋಟರಿ ಕ್ಲಬ್‌ಗಳ ಸಹಭಾಗಿತ್ವದಲ್ಲಿ ಹೂ ಕೃಷಿಗೆ ಉತ್ತೇಜನ ಕಾರ್ಯಕ್ರಮದಡಿಯಲ್ಲಿ ಗುರುವಾರ ಬಂಟಕಲ್ಲು ಶಿರ್ವ ರೋಟರಿ ಸಭಾಭವನದಲ್ಲಿ ಜಿಲ್ಲೆಯ ರೈತರಿಗೆ ಆಯೋಜಿಸ ಲಾದ ಉಡುಪಿ ಮಲ್ಲಿಗೆ ಬೆಳೆಯ ವೈಜ್ಞಾನಿಕ ಬೇಸಾಯ ಪದ್ದತಿಯ ಕುರಿತು ತರಬೇತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ತಾಪಂ ಸದಸ್ಯೆ ಗೀತಾ ವಾಗ್ಳೆ ಮಾತನಾಡಿ, ಬಂಟಕಲ್ಲು, ಶಂಕರಪುರ, ಶಿರ್ವ ಪ್ರದೇಶಗಳಲ್ಲಿ ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಮಲ್ಲಿಗೆ ಕೃಷಿ ಆಧಾರವಾಗಿದೆ. ಇಲಾಖೆಯಿಂದ ಸಿಗುತ್ತಿರುವ ವೈಜ್ಞಾನಿಕ ಕೃಷಿ ಮಾಹಿತಿ ಹಾಗೂ ಇತರ ಸೌಲ್ಯಗಳನ್ನು ಕೃಷಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಶಿರ್ವ ಗ್ರಾಪಂ ಅಧ್ಯಕ್ಷೆ ವಾರಿಜಾ ಪೂಜಾರ್ತಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕ ಬಂಟಕಲ್ಲು ರಾಮಕೃಷ್ಣ ಶರ್ಮಾ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಚೈತನ್ಯ, ಪ್ರಗತಿಪರ ಕೃಷಿಕ ಕಳತ್ತೂರು ರಾಮಚಂದ್ರ ಪೈ ಮಲ್ಲಿಗೆ ಬೆಳೆಗಾರರಿಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಸದಸ್ಯೆ ಗ್ರೇಸಿ ಕರ್ಡೋಜ ಸಹಕರಿಸಿದರು. ರೋಟರಿ ಅಧ್ಯಕ್ಷ ದೆಂದೂರು ದಯಾನಂದ ಶೆಟ್ಟಿ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ರಾಘವೇಂದ್ರ ನಾಯಕ್ ಕಾರ್ಯಕ್ರಮ ನಿರುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News