ಪುತ್ತೂರು: ಆದಿವಾಸಿ ಕೊರಗ ಮಕ್ಕಳ ದಾಖಲಾತಿ ಶಾಲಾ ಅಭಿಯಾನ
ಪುತ್ತೂರು: ಶಾಲೆಯಿಂದ ಹೊರಗುಳಿದ ಆದಿವಾಸಿ ಕೊರಗ ಸಮುದಾಯದ ಮಕ್ಕಳನ್ನು ಮರು ದಾಖಲಾತಿ ಮಾಡುವ ನಿಟ್ಟಿನಲ್ಲಿ ತಾಲೂಕು ಕೊರಗರ ಅಭಿವೃದ್ಧಿ ಸಂಘ ಮತ್ತು ಸಮಾಜ ಕಲ್ಯಾಣ ಇಲಾಖೆ ಪುತ್ತೂರು ಮತ್ತು ಚಿಗುರು ಯುವಜನರ ತಂಡದ ವತಿಯಿಂದ ಕೊರಗ ಮಕ್ಕಳ ದಾಖಲಾತಿ - ಅಭಿಯಾನವು ಮೇ 30ರಂದು ದರ್ಬೆಯಲ್ಲಿನ ತಾಲೂಕು ಕೊರಗ ಸಮುದಾಯ ಭವನದದಲ್ಲಿ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಗಿರಿಜನ ಅಭಿವೃದ್ಧಿ ವಿಸ್ತರಣಾಧಿಕಾರಿ ಅನ್ನಪೂರ್ಣ ಅವರು ಕೊರಗ ಸಮುದಾಯದವರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮಾಹಿತಿ ಪಡೆದರು. ಬಳಿಕ ಅವರನ್ನು ಪುನಃ ಶಾಲೆಗೆ ಸೇರಿಸುವ ಮತ್ತು ಹೊಸ ಸೇರ್ಪಡೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೇಲ್ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಈಶ್ವರ ನಾಯ್ಕ್, ತಾಲೂಕು ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಬಾಬು ಪಿಜಕ್ಕಳ, ಕಾರ್ಯದರ್ಶಿ ರಾಧಾ ಕೊಡಿಮರ, ಚಿಗುರು ಯುವಜನರ ತಂಡದ ಕಾವ್ಯ, ರಮೇಶ್, ದಿನೇಶ್, ಸುರೇಶ್ ಮತ್ತು ಸಾಮಾಜಿ ಕಾರ್ಯಕರ್ತ ಪ್ರಕಾಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 9 ಮಂದಿ ಮಕ್ಕಳನ್ನು ಹೊಸ ಸೇರ್ಪಡೆ ಮಾಡಲಾಯಿತು. ಶಾಲೆಯಿಂದ ಹೊರಗುಳಿದಿದ್ದ ಇಬ್ಬರು ಮಕ್ಕಳನ್ನು ಮರು ದಾಖಲಾತಿ ಮಾಡಲಾಯಿತು.