ಗಡಿಪಾರು ವಿಚಾರಣೆ ಎದುರಿಸಲು ಅಸಾಂಜ್ ‘ತೀರಾ ಅಸ್ವಸ್ಥ’
ಲಂಡನ್, ಮೇ 30: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಗಡಿಪಾರು ಮಾಡಬೇಕೆಂದು ಕೋರಿ ಅಮೆರಿಕ ಸಲ್ಲಿಸಿರುವ ಮನವಿಯ ವಿಚಾರಣೆಗೆ ಬ್ರಿಟನ್‌ನ ಜೈಲೊಂದರಿಂದ ವೀಡಿಯೊ ಲಿಂಕ್ ಮೂಲಕ ಹಾಜರಾಗಲು ಅಸಾಂಜ್ ‘ತೀರಾ ಅಸ್ವಸ್ಥ’ರಾಗಿದ್ದಾರೆ ಎಂದು ಅವರ ವಕೀಲರು ಗುರುವಾರ ಹೇಳಿದ್ದಾರೆ.
ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಿಂದ ಅಸಾಂಜ್‌ರನ್ನು ಬ್ರಿಟಿಶ್ ಪೊಲೀಸರು ಎಪ್ರಿಲ್ 11ರಂದು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ.
ರಾಷ್ಟ್ರೀಯ ಭದ್ರತೆಯ ವಿಷಯಗಳನ್ನು ಅಸಾಂಜ್ ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಅವರನ್ನು ಗಡಿಪಾರು ಮಾಡಬೇಕೆಂದು ಕೋರಿ ಅಮೆರಿಕ ಬ್ರಿಟನ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.
ಅಸಾಂಜ್‌ರ ಆರೋಗ್ಯದ ಬಗ್ಗೆ ಭಾರೀ ಕಳವಳವಿದೆ ಎಂದು ವಿಕಿಲೀಕ್ಸ್ ಹೇಳಿದೆ. ಅವರನ್ನು ಬ್ರಿಟನ್‌ನ ಬೆಲ್ಮರ್ಶ್ ಜೈಲಿನಲ್ಲಿರುವ ಆರೋಗ್ಯ ವಾರ್ಡೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅದು ಹೇಳಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಧೀಶೆ ಎಮ್ಮಾ ಅರ್ಬತ್‌ನಾಟ್ ಜೂನ್ 12ಕ್ಕೆ ಮುಂದೂಡಿದರು.