ದ್ರೋಹಿಗಳಿಗೆ ಶಿಕ್ಷೆಯಾಗಬೇಕು ಎಂಬ ಹೇಳಿಕೆಗೆ ಬದ್ಧ: ಸಿದು

Update: 2019-05-30 16:58 GMT

ಚಂಡೀಗಢ, ಮೇ 30: ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸದ್ರೋಹ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದು ಹೇಳಿದ್ದಾರೆ.

ತಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಅಲ್ಲದೆ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ವಿರುದ್ಧವೂ ಮಾತಾಡಿಲ್ಲ. ತನ್ನನ್ನು ಅವಾಚ್ಯವಾಗಿ ನಿಂದಿಸಿದ್ದರೂ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತನ ವಿರುದ್ಧ ತಾನು ಮಾತನಾಡಿಲ್ಲ. ಯಾಕೆಂದರೆ ಆಡಳಿತ ಪಕ್ಷದವರು ವಿಪಕ್ಷದವರ ವಿರುದ್ಧ ಮಾತ್ರ ಟೀಕಿಸಬೇಕು ಎಂದು ಸಿದು ಹೇಳಿದರು.

ಪಂಜಾಬ್‌ನ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್‌ಗೆ ಸೋಲುಂಟಾಗಿದೆ ಎಂಬ ಅಮರೀಂದರ್ ಹೇಳಿಕೆಯನ್ನು ಉಲ್ಲೇಖಿಸಿದ ಸಿಧು, ಬಠಿಂಡ ಕ್ಷೇತ್ರವನ್ನು ಅತ್ಯಂತ ಕಡಿಮೆ ಅಂತರದಿಂದ ಕಳೆದುಕೊಂಡಿದ್ದೇವೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ತಾನು ಪ್ರಚಾರ ಮಾಡಿರುವ 55 ಕ್ಷೇತ್ರಗಳಲ್ಲಿ ಕಾಂಗ್ರೆಸ್ 53ರಲ್ಲಿ ಗೆದ್ದಿದೆ. ಈ ಬಗ್ಗೆ ಯಾಕೆ ಯಾರೂ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಸ್ಥಳೀಯಾಡಳಿತ ಸಚಿವರಾಗಿರುವ ಸಿಧು ಸಚಿವ ಖಾತೆಯನ್ನು ಬದಲಿಸುವ ಬಗ್ಗೆ ಅಮರೀಂದರ್ ಸಿಂಗ್ ಮೇ 24ರಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದು, ಖಾತೆ ಬದಲಾಯಿಸಿದರೆ ಅದು ಅಮರೀಂದರ್ ಸಿಂಗ್ ಅವರ ನಿರ್ಧಾರವಾಗಿರುತ್ತದೆ. ತನ್ನನ್ನು ವಿರೋಧಿಸಿದ ಯಾವುದೇ ಸಚಿವನ ವಿರುದ್ಧವೂ ಹೇಳಿಕೆ ನೀಡುವುದಿಲ್ಲ. ಯಾಕೆಂದರೆ ಅವರೆಲ್ಲಾ ತನ್ನ ಸಹೋದರರು . ಸಚಿವನಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ. ಇದಕ್ಕೆ ವ್ಯತಿರಿಕ್ತ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದರೆ ಅದವರ ಆಯ್ಕೆಗೆ ಬಿಟ್ಟ ವಿಷಯ ಎಂದರು. ಸ್ಥಳೀಯಾಡಳಿತ ಇಲಾಖೆಯಲ್ಲಿ ಈ ಹಿಂದೆ ಸಿಎಲ್‌ಯುಗೆ ಸಹಿ ಹಾಕುವುದನ್ನು ಬಿಟ್ಟರೆ ಬೇರೆ ಯಾವ ಕೆಲಸವೂ ನಡೆಯುತ್ತಿರಲಿಲ್ಲ. ಕಳೆದ ಎರಡು ವರ್ಷಗಳ ತನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ ಎಂದು ಸಿಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News