ರಾಜೀವ್ ಕುಮಾರ್‌ಗೆ ಒಂದು ತಿಂಗಳ ನಿರೀಕ್ಷಣಾ ಜಾಮೀನು

Update: 2019-05-30 17:00 GMT

ಕೋಲ್ಕೊತಾ, ಮೇ 29: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ತನ್ನ ವಿರುದ್ಧ ಜಾರಿಗೊಳಿಸಿದ ನೋಟಿಸನ್ನು ರದ್ದುಗೊಳಿಸುವಂತೆ ಕೋರಿ ಸಿಐಡಿ ಎಡಿಜಿ ರಾಜೀವ್ ಕುಮಾರ್ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋಲ್ಕತಾ ಉಚ್ಚ ನ್ಯಾಯಾಲಯ ಅವರಿಗೆ ಒಂದು ತಿಂಗಳ ನಿರೀಕ್ಷಣಾ ಜಾಮೀನು ನೀಡಿದೆ.

ಸಿಬಿಐ ರಾಜೀವ್ ಕುಮಾರ್ ಅವರ ಕಸ್ಟಡಿ ವಿಚಾರಣೆಗೆ ಕೋರಿ ನೋಟಿಸ್ ಕಳುಹಿಸಿದ ಹಾಗೂ ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ ಬಳಿಕ ರಾಜೀವ್ ಕುಮಾರ್ ಕೋಲ್ಕತಾ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಮನವಿ ಸಲ್ಲಿಸಲು ನ್ಯಾಯಮೂರ್ತಿ ಪ್ರತೀಕ್ ಪ್ರಕಾಶ್ ಬ್ಯಾನರ್ಜಿ ಅವರು ರಾಜೀವ್ ಕುಮಾರ್ ಅವರಿಗೆ ಅನುಮತಿ ನೀಡಿದ್ದರು. ಈ ಹಿಂದೆ ರಾಜೀವ್ ಕುಮಾರ್ ಪರ ವಕೀಲರು ಉಚ್ಚ ನ್ಯಾಯಾಲಯದ ರಜಾ ಕಾಲದ ಪೀಠವನ್ನು ಸಂಪರ್ಕಿಸಿದ್ದರು ಹಾಗೂ ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದರು.

ಸಿಬಿಐ ಶನಿವಾರ ರಾಜೀವ್ ಕುಮಾರ್ ವಿರುದ್ಧ ಸಮನ್ಸ್ ಜಾರಿ ಮಾಡಿರುವುದೇ ಅಲ್ಲದೆ, ಲುಕೌಟ್ ನೋಟೀಸ್ ಅನ್ನು ಕೂಡ ಜಾರಿ ಮಾಡಿತ್ತು. ಅಲ್ಲದೆ ರಾಜೀವ್ ಕುಮಾರ್ ಅವರು ದೇಶ ತ್ಯಜಿಸುವುದು ಕಂಡು ಬಂದರೆ ಸಿಬಿಐಗೆ ಮಾಹಿತಿ ನೀಡುವಂತೆ ಎಲ್ಲ ವಿಮಾನ ನಿಲ್ದಾಣಗಳು ಹಾಗೂ ವಲಸೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News