ಎನ್‌ಆರ್‌ಸಿ ಸಂತ್ರಸ್ತರಿಗೆ ಅಹವಾಲು ಮಂಡಿಸಲು ಮುಕ್ತ ಅವಕಾಶ ನೀಡಿ: ಸುಪ್ರೀಂ ಕೋರ್ಟ್

Update: 2019-05-30 17:06 GMT

ಹೊಸದಿಲ್ಲಿ, ಮೇ 30: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ತಮ್ಮ ಹೆಸರು ಸೇರಿಸದಿರುವುದನ್ನು ಪ್ರಶ್ನಿಸುವವರಿಗೆ ಮುಕ್ತ ಅವಕಾಶ ನೀಡಿ ಎಂದು ಸುಪ್ರೀಂ ಕೋರ್ಟ್ ಗುರುವಾರ ಎನ್‌ಆರ್‌ಸಿ ಸಂಯೋಜಕರಿಗೆ ನಿರ್ದೇಶಿಸಿದೆ. ಜುಲೈ 11ರ ಅಂತಿಮ ಗಡುವಿನ ಒಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಏಕೈಕ ಕಾರಣಕ್ಕಾಗಿ ನೀವು ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಡಿ ಎಂದು ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸಂಯೋಜಕ ಪ್ರತೀಕ್ ಹಜೇಲಾ ಅವರಿಗೆ ಸೂಚಿಸಿದೆ.

ಎನ್‌ಆರ್‌ಸಿಯ ಅಧಿಕಾರಿಗಳು ಪ್ರತಿಪಾದನೆ ಹಾಗೂ ಆಕ್ಷೇಪಗಳನ್ನು ನಿರ್ವಹಿಸುವ ಬಗ್ಗೆ ಮಾಧ್ಯಮ ವರದಿ ಮಾಡಿವೆ. ಮಾಧ್ಯಮಗಳ ವರದಿ ಯಾವಾಗಲೂ ಸುಳ್ಳಾಗದು. ಕೆಲವು ಸಂದರ್ಭ ಅವುಗಳು ಸರಿಯಾದುದನ್ನೇ ಹೇಳುತ್ತವೆ. ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳು ಇಲ್ಲ ಎಂಬುದನ್ನು ಖಚಿತಪಡಿಸಿ ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಎಂದು ನ್ಯಾಯಾಲಯ ನಿರ್ದೇಶಿಸಿದೆ. ಎನ್‌ಆರ್‌ಸಿಯಿಂದ ಮಾಜಿ ಯೋಧನನ್ನು ಹೊರಗಿರಿಸಿರುವುದರ ಬಗ್ಗೆ ನ್ಯಾಯಾಲಯ ಸಂಯೋಜಕರನ್ನು ಪ್ರಶ್ನಿಸಿದೆ. ಅಲ್ಲದೆ ಇದು ಮನ ಕಲಕುವ ಘಟನೆ ಎಂದು ಕರೆದಿದೆ.

ಪಾರದರ್ಶಕ ಪ್ರಕ್ರಿಯೆ ಮೂಲಕ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಹಾಗೂ ಎನ್‌ಆರ್‌ಸಿ ಪ್ರಕಿಯೆಯಯನ್ನು ತ್ವರಿತವಾಗಿ ಪೂರ್ಣಗೊಳಿಸದಂತೆ ಹಜೇಲಾ ಅವರಿಗೆ ನ್ಯಾಯಾಲಯ ಸೂಚಿಸಿದೆ. ಅಸ್ಸಾಂ ಎನ್‌ಆರ್‌ಸಿಯ ಅಂತಿಮ ಕರಡಿನ ಪ್ರಕಟಣೆಗೆ ಜುಲೈ 31 ಅಂತಿಮ ಗಡು. ಈ ಬಗ್ಗೆ ಅನುಸಂಧಾನ ಮಾಡಿಕೊಳ್ಳುವಂತದಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಅಲ್ಲದೆ ಎನ್‌ಆರ್‌ಸಿಯಲ್ಲಿ ತಮ್ಮ ಹೆಸರನ್ನು ಸೇರಿಸುವಂತೆ ಪ್ರತಿಪಾದನೆ ಸಲ್ಲಿಸುವವರ ವೆಚ್ಚವನ್ನು ಅದು ಭರಿಸಬಾರದು. ತಮ್ಮ ಪ್ರಕರಣವನ್ನು ಪ್ರಸ್ತುತಪಡಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News