ಸುಷ್ಮಾ ಸ್ವರಾಜ್‌ರನ್ನು ಕೈಬಿಟ್ಟ ಮೋದಿ ನೂತನ ಸಂಪುಟ

Update: 2019-05-30 17:22 GMT

ಹೊಸದಿಲ್ಲಿ, ಮೇ 30: ಈ ಹಿಂದಿನ 7 ಸಚಿವರ ಮಂಡಳಿಯಲ್ಲಿ ಬಿಜೆಪಿಯ ಅತಿ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್ ಅವರನ್ನು ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರಕಾರದಲ್ಲಿ ಕೈಬಿಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪಕ್ಷ ಹಾಗೂ ಸರಕಾರದಲ್ಲಿ ಕಳೆದ ಒಂದು ದಶಕದಿಂದ ಪ್ರಮುಖ ಹುದ್ದೆ ನಿರ್ವಹಿಸಿರುವ 67ರ ಹರೆಯದ ಸುಷ್ಮಾ ಸ್ವರಾಜ್ ಅವರ ಅನುಪಸ್ಥಿತಿ ನೂತನ ಸಂಪುಟದಲ್ಲಿ ಎದ್ದು ಕಾಣುತ್ತಿತ್ತು. ಇವರಲ್ಲದೆ ನೂತನ ಸಚಿವರ ಮಂಡಳಿಯಲ್ಲಿ ಸುರೇಶ್ ಪ್ರಭು, ಜೆ.ಪಿ. ನಡ್ಡಾ, ಮಹೇಶ್ ಶರ್ಮಾ, ರಾಜ್ಯವರ್ಧನ ರಾಥೋಡ್ ಹಾಗೂ ಜಯಂತ್ ಸಿನ್ಹಾ ಕೂಡ ಕಾಣೆಯಾಗಿದ್ದಾರೆ. 

ಸುಷ್ಮಾ ಸ್ವರಾಜ್ ಅವರನ್ನು ನೂತನ ಸಚಿವರ ಮಂಡಳಿಯಿಂದ ಕೈಬಿಡಲು ಕಾರಣ ಇದುವರೆಗೆ ಸ್ಪಷ್ಟವಾಗಿಲ್ಲ. ಅವರ ಅನಾರೋಗ್ಯದ ಕಾರಣಕ್ಕೆ ಕೈಬಿಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಮೋದಿ ಸರಕಾರದಲ್ಲಿ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. ಅನಾರೋಗ್ಯದ ಕಾರಣದಿಂದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ತನ್ನ ಅಧಿಕಾರವಧಿಯಲ್ಲಿ ಸುಷ್ಮಾ ಸ್ವರಾಜ್ ಬಹಳಷ್ಟು ಜನಪ್ರಿಯರಾಗಿದ್ದರು. ಜಗತ್ತಿನ ಯಾವುದೇ ಭಾಗದಲ್ಲಿರುವ ಭಾರತೀಯ ಕೇವಲ ಒಂದು ಟ್ವೀಟ್ ಮಾಡಿದರೆ ಅವರು ಕೂಡಲೇ ಪ್ರತಿಕ್ರಿಯಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News