ಪ್ರಧಾನಿ ಪ್ರಮಾಣವಚನ: ದ.ಕ. ಜಿಲ್ಲೆಯಲ್ಲಿ ಮೋದಿ ಅಭಿಮಾನಿಗಳಿಂದ ಸಂಭ್ರಮ
ಮಂಗಳೂರು, ಮೇ 30: ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ನಗರದ ಕೆಲವು ಹೋಟೆಲ್‌ಗಳು, ಜ್ಯೂಸ್ ಅಂಗಡಿಗಳ ಮಾಲಕರು ಗ್ರಾಹಕರಿಗೆ ಉಚಿತ ಉಪಾಹಾರ ನೀಡುವ ಮೂಲಕ ಪ್ರಧಾನಿಯಾಗಿ ದೇಶಕ್ಕೆ ಮೋದಿಯವರ ಅವಶ್ಯಕತೆಯನ್ನು ಸಾರಿದರು.
400 ಚೆಂಡು ಮಲ್ಲಿಗೆ ನೀಡಿದ ಫಕೀರಬ್ಬ !: ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಸಂಭ್ರಮವನ್ನು ಮಂಗಳೂರಿನ ಹೂವಿನ ವ್ಯಾಪಾರಿ ಫಕೀರಬ್ಬ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ಒಂದೆಡೆ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದರೆ, ಮತ್ತೊಂದೆಡೆ ಫಕೀರಬ್ಬ ಅವರು ಉಚಿತವಾಗಿ ಮಲ್ಲಿಗೆ ವಿತರಿಸುತ್ತಾ ಸಂಭ್ರಮಿಸಿದರು. ನಗರದ ಸಿಟಿಸೆಂಟರ್ ಮಾಲ್ ಮುಂಭಾಗದ ವಸಂತ ಮಹಲ್ ಬಳಿ ಅವರು ಮಲ್ಲಿಗೆಯನ್ನು ಮಹಿಳೆಯರಿಗೆ ಉಚಿತವಾಗಿ ವಿತರಿಸುತ್ತಿದ್ದರು. ಸುಮಾರು 100 ಅಟ್ಟೆ ಅಂದರೆ 400 ಚೆಂಡು ಮಲ್ಲಿಗೆಯನ್ನು ಅವರು ಉಚಿತವಾಗಿ ನೀಡುವ ಮೂಲಕ ಮೋದಿ ಅಭಿಮಾನ ಮೆರೆದರು.
ದಿನದ ವ್ಯಾಪಾರವನ್ನು ಲೆಕ್ಕಿಸದೆ ಅವರು ಉಚಿತವಾಗಿ ಮಲ್ಲಿಗೆಯನ್ನು ವಿತರಿಸಿದರು. ಫಕೀರಬ್ಬ ಅವರು ವಸಂತ ಮಹಲ್ ಬಳಿ ಮಾಸ್ಟರ್ ಫ್ಲವರ್ಸ್ ಆ್ಯಂಡ್ ಪ್ಲಾಸ್ಟಿಕ್ ಡೆಕೋರೇಟಿವ್ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಮೋದಿ ಅಭಿಮಾನಿ.
ಸುವರ್ಣ ಹೋಟೆಲ್‌ನಲ್ಲಿ ಶರಬತ್: ಮಣ್ಣಗುಡ್ಡೆಯ ಸುವರ್ಣ ಹೋಟೆಲ್‌ನಲ್ಲಿ ಗ್ರಾಹಕರಿಗೆ ಉಚಿತವಾಗಿ ಸಿಹಿ ತಿಂಡಿ ಮತ್ತು ಶರಬತ್ ವ್ಯವಸ್ಥೆಯನ್ನು ಮಾಡಲಾಗಿತ್ತು. ‘ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಿರುವುದು ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ತಮ್ಮ ಹೋಟೆಲ್‌ನಲ್ಲಿ ಸುಮಾರು 1,500 ಮಂದಿಗೆ ಶರಬತ್ ಮತ್ತು ಸ್ವೀಟ್ ವ್ಯವಸ್ಥೆಯನ್ನು ಮಾಡಿದ್ದೇವೆ’ ಎಂದು ಹೋಟೆಲ್ ಮಾಲಕ ರಾಮನಾಥ್ ಸುವರ್ಣ ಹೇಳಿದರು.
ಉಚಿತ ಬಸ್ ಸೇವೆ: ದೇಶದ 14ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಪ್ರಯುಕ್ತ ಬಸ್ ಮಾಲಕರೊಬ್ಬರು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಗಮನಸೆಳೆದರು. ಮೂಡಬಿದ್ರೆ ಕಿನ್ನಿಗೋಳಿ ಹಳೆಯಂಗಡಿ ಸುರತ್ಕಲ್ ಮಂಗಳೂರಿಗೆ ಹೋಗುವ ಕೋಟ್ಯಾನ್ ಬಸ್ ಉಚಿತ ಸೇವೆಯನ್ನು ಒದಗಿಸಿತು.
ಇಬ್ರಾಹಿಂರವರ ಮೋದಿ ಪ್ರೇಮ: ಮೋದಿಜಿಯವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಮೋದಿಯವರ ಅಭಿಮಾನಿ ಮಂಗಳಪದವಿನ ಇಬ್ರಾಹೀಂ ಅವರು ವಿಶೇಷ ರೀತಿಯಲ್ಲಿ ವಿಜಯೋತ್ಸವ ಆಚರಿಸಿದರು. ಆಟೋ ಚಾಲಕರಾಗಿರುವ ಇಬ್ರಾಹೀಂ ಜನತೆಗೆ ಚಹಾ ವಿತರಣೆಯ ಮೂಲಕ ಗಮನಸೆಳೆದರು. ತಮ್ಮ ಆಟೋದಲ್ಲಿಯೇ ದೊಡ್ಡ ಬ್ಯಾನರ್ ಅಳವಡಿಸಿ, ‘ದೇಶದ ಏಕತೆ ಮತ್ತು ಸಮಗ್ರತೆಗೆ, ಪ್ರಜಾಪ್ರಭುತ್ವದ ನಂಬಿಕೆ ಉಳಿಸಲು ಮೋದಿ ಬೇಕು’ ಎಂಬ ಘೋಷಣೆಯ ಬ್ಯಾನರನ್ನು ಅವರು ತಮ್ಮ ಆಟೋದಲ್ಲಿ ಅಳವಡಿಸಿದ್ದರು.
ಬೃಹತ್ ಪರದೆಯ ಮೂಲಕ ವೀಕ್ಷಣೆಗೆ ಅವಕಾಶ
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಇದೀಗ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಎದುರು ಪ್ರಮಾಣ ವಚನ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ನೂರಾರು ಮಂದಿ ಎಲ್‌ಇಡಿ ಬೃಹತ್ ಪರದೆಯ ಮೂಲಕ ಮೋದಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡಿದರು. ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗವೂ ಈ ವ್ಯವಸ್ಥೆ ಮಾಡಲಾಗಿತ್ತು.