×
Ad

'ಕುವೈತ್‌ನಲ್ಲಿದ್ದ ಭಾರತೀಯ ಸಂತ್ರಸ್ತರು ಶೀಘ್ರದಲ್ಲಿ ವಾಪಸ್'

Update: 2019-05-30 23:15 IST

ಮಂಗಳೂರು, ಮೇ 30: ಕುವೈತ್‌ಗೆ ಉದ್ಯೋಗವನ್ನರಸಿ ಹೋಗಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರಿನ 35 ಯುವಕರು ಸಹಿತ ಭಾರತದ ಒಟ್ಟು 75 ಜನರು ಭಾರತಕ್ಕೆ ವಾಪಸಾಗುವ ಮಾರ್ಗ ಸುಲಭವಾಗಿದೆ. ಕುವೈತ್‌ನ ಕಾರ್ಮಿಕ ಹಿತಾಸಕ್ತಿಯನ್ನು ಕಾಪಾಡುವ ಸರಕಾರಿ ಸ್ವಾಮ್ಯದ ಸಂಸ್ಥೆ (ಶೋನ್ ನ್ಯಾಯಾಲಯ) ಯಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿಷಯ ತಿಳಿದುಬಂದಿದೆ.

ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉಪಕಾರ್ಯದರ್ಶಿ ಶಿಬಿ ಯು.ಎಸ್., ಶೋನ್, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್ (ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಾಂಟ್ರಾಕ್ಟ್ ಕಂಪೆನಿ ಪ್ರತಿನಿಧಿಗಳು, ಭಾರತೀಯ ರಾಯಭಾರಿ ಕಚೇರಿಯ ಪರವಾಗಿ ಅರೇಬಿಕ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದ ಮಾಡುವ ಓರ್ವ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಕಂಪೆನಿಯು ಸಂತ್ರಸ್ತ ಕರಾವಳಿ ಸೇರಿದಂತೆ ಭಾರತೀಯ ನೌಕರರಿಗೆ ತಲಾ ಒಟ್ಟು 100 ದಿನಾರ್ (ಸುಮಾರು 22,800 ರೂ.) ಪಾವತಿಸುವುದಾಗಿ ಹೇಳಿಕೊಂಡಿದೆ. ಅಂದರೆ ಕೆಲವು ನೌಕರರಿಗೆ ಕಂಪೆನಿಯು ಈಗಾಗಲೇ 40 ದಿನಾರ್ ಒದಗಿಸಿದ್ದು, ಅವರಿಗೆ ಬಾಕಿ 60 ದಿನಾರ್ ಮಾತ್ರ ದೊರೆಯಲಿದೆ.

ಇನ್ನು ಕೆಲ ನೌಕರರಲ್ಲಿ ಕಂಪೆನಿ ಮೊಬೈಲ್ ಹಾಗೂ ಕೆಲ ಕಂಪೆನಿ ವಸ್ತುಗಳು ಇದ್ದು, ಅವುಗಳನ್ನು ರವಿವಾರದೊಳಗೆ ಕಂಪೆನಿಗೆ ಮರಳಿಸಿ ಕ್ಲಿಯರೆನ್ಸ್ ಪತ್ರ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ನೌಕರರಲ್ಲಿ ಸದ್ಯ ಇರುವ ವೀಸಾ ರದ್ದುಗೊಂಡಲ್ಲಿ ಅವರು ಸ್ವದೇಶಕ್ಕೆ ವಾಪಸಾಗಲು ಸಾಧ್ಯವಾಗುತ್ತದೆ. ಅವರಿಗೆ ಅಲ್ಲಿ ಒಂದು ತಿಂಗಳು ಅಲ್ಲಿಯೇ ಉಳಿದುಕೊಳ್ಳಬಹುದಾದ ತಾತ್ಕಾಲಿಕ ವೀಸಾ ದೊರೆಯುತ್ತದೆ. ಟಿಕೆಟ್ ವ್ಯವಸ್ಥೆಯಾದರೆ ತಕ್ಷಣ ತಾಯ್ನೆಲಕ್ಕೆ ಮರಳಬಹುದು ಎಂದು ಮೂಲಗಳು ತಿಳಿಸಿವೆ.

ಕಾರ್ಮಿಕರ ಕೃತಜ್ಞತೆ: ಕುವೈತ್‌ನಲ್ಲಿ ಸಂಕಷ್ಟಕ್ಕೆ ತೆರಳಿದ ಮಂಗಳೂರು ಯುವಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಸಹಕಾರ ನೀಡಿದ ಸಾಸಕ ಡಿ.ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಸಮಸ್ಯೆ ಬಗ್ಗೆ ಜಗತ್ತಿನ ಗಮನ ಸೆಳೆದ ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ವಿಶೇಷ ಕೃತಜ್ಞತೆ ತಿಳಿಸುವಂತೆ ಕಾರ್ಮಿಕರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುವೈತ್‌ನಲ್ಲಿ  ಜೂ. 2ರಂದು ಮತ್ತೆ ಸಭೆ ಸೇರಲು ನಿರ್ಧರಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯ ನೌಕರರ ವೀಸಾ ರದ್ದುಗೊಳಿಸುವ ಕುರಿತು ಅಂದು ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಕುರಿತು ಭರವಸೆ ಇದೆ.
- ಮಂಜೇಶ್ವರ ಮೋಹನ್‌ದಾಸ್ ಕಾಮತ್,
ಭಾರತೀಯ ಇಂಜಿನಿಯರ್ಸ್‌ ಕುವೈತ್ ಘಟಕದ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News