ಚುನಾವಣಾ ಸೋಲಿನ ಅವಲೋಕನ ಮಾಡಬೇಕಿದೆ: ಸಿಪಿಎಂ

Update: 2019-05-30 17:47 GMT

ಹೊಸದಿಲ್ಲಿ, ಮೇ.30: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಹೀನಾಯ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಗಂಭೀರವಾಗಿ ಸ್ವಅವಲೋಕನ ಮಾಡುವ ಅಗತ್ಯವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಈ ಸೋಲು ಸಿಪಿಎಂನ ಅಧಃಪತನ ಎಂದು ಭಾವಿಸುವುದು ತಪ್ಪು ಎಂದು ಒತ್ತಿ ಹೇಳಿವೆ. ಸಿಪಿಎಂನ ಪಾಕ್ಷಿಕ ಜನರ ಪ್ರಜಾಪ್ರಭುತ್ವ (ಪೀಪಲ್ಸ್ ಡೆಮಾಕ್ರಸಿ)ದ ಸಂಪಾದಕೀಯದಲ್ಲಿ ಈ ಕುರಿತು ಬರೆಯಲಾಗಿದ್ದು, ಎಡಪಕ್ಷ ಮತ್ತೆ ಮೇಲೆದ್ದು ಬರಲಿದೆ. ಇದು ಎಡಪಕ್ಷದ ಅಧಃಪತನ ಎಂದು ಮುಖ್ಯವಾಹಿನಿಯ ಪತ್ರಿಕೆಗಳು ಶರ ಬರೆದಿರುವುದು ತಪ್ಪು ಎಂದು ತಿಳಿಸಿದೆ.

ಭಾರತೀಯ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಒಂದು ಮತ್ತು ತಮಿಳುನಾಡಿನಲ್ಲಿ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ತಮಿಳುನಾಡಿನಲ್ಲಿ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು.

ಇನ್ನು ಸಿಪಿಐ ಕೇವಲ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. 2019ರ ಲೋಕಸಭಾ ಚುನಾವಣಾ ನಿರ್ವಹಣೆ ಸಿಪಿಎಂ ಮತ್ತು ಕಮ್ಯುನಿಸ್ಟ್ ಪಕ್ಷಗಳ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಕಳಪೆಯಾಗಿದೆ. ಎಡಪಕ್ಷಗಳ ಮತ ಗಳಿಕೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಆತಂಕದ ವಿಷಯವಾಗಿದೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News