ಮೋದಿಯ ಸಂಪುಟದಲ್ಲಿ ಈ ಬಾರಿ ಈ ಜನಪ್ರಿಯ ಸಚಿವರಿಲ್ಲ...
ಹೊಸದಿಲ್ಲಿ, ಮೇ 30: ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈ ಹಿಂದಿನ ಸರಕಾರದ ಹಲವು ಜನಪ್ರಿಯ ಸಚಿವರು ಹೊರಗುಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಕ್ಯಾಬಿನೆಟ್‌ನಲ್ಲಿ ಒಳಗೊಳ್ಳದ ಬಿಜೆಪಿ ನಾಯಕರಲ್ಲಿ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಜಯಂತ್ ಸಿನ್ಹಾ ಹಾಗೂ ಜೆ.ಪಿ. ನಡ್ಡಾ ಸೇರಿದ್ದಾರೆ. ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ, ತಾನು ಕಳೆದ 18 ತಿಂಗಳಿಂದ ಕೆಲವು ಗಂಭೀರ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಆದುದರಿಂದ ನೂತನ ಸರಕಾರದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಿಳಿಸಿದ್ದರು.
ಈ ಹಿಂದಿನ ಸರಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಭಿಕರ ಮಧ್ಯೆ ಕುಳಿತುಕೊಂಡಿದ್ದರು. ನರೇಂದ್ರ ಮೋದಿ ಅವರ ನೂತನ ಸರಕಾರ ಒಳಗೊಳ್ಳದ ಇನ್ನೋರ್ವ ಪ್ರಮುಖರೆಂದರೆ ರಾಜ್ಯವರ್ಧನ್ ಸಿಂಗ್ ರಾಥೋಡ್. ಅವರು ಕೂಡ ಸಭಿಕರ ಮಧ್ಯೆ ಕುಳಿತುಕೊಂಡಿದ್ದರು. ಅವರು ರಾಜಸ್ಥಾನದ ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಅವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಹಿಂದಿನ ಸರಕಾರದಲ್ಲಿ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವರಾಗಿದ್ದ ಜಯಂತ್ ಸಿನ್ಹಾ ಈ ಬಾರಿಯ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಅವರು ಜಾರ್ಖಂಡ್‌ನ ಹಝಾರಿಭಾಗ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆಯಾಗಿದ್ದರು. ನೂತನ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಳ್ಳದವರಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ಕೂಡಾ ಸೇರಿದ್ದಾರೆ.